ಕುಂದಾಪುರ, ಡಿ 15 (DaijiworldNews/SM): ಸ್ಕ್ಯಾನಿಂಗ್ ರಿಪೋರ್ಟಿನಲ್ಲಿ ಸಾಮಾನ್ಯ ಹೆರಿಗೆ ಅಸಾಧ್ಯ ಎಂದು ವರದಿ ಬಂದಿದ್ದರೂ ವೈದ್ಯೆಯ ನಿರ್ಲಕ್ಷ್ಯದಲ್ಲಿ ಸಾಮಾನ್ಯ ಹೆರಿಗೆ ಮಾಡಿಸಿದ ಬಳಿಕ ಬಾಣಂತಿ ಸಾವನ್ನಪ್ಪಿದ್ದಾರೆ ಎನ್ನಲಾದ ಘಟನೆಯೊಂದು ಕುಂದಾಪುರದ ಆಸ್ಪತ್ರೆಯೊಂದರಲ್ಲಿ ಡಿಸೆಂಬರ್ 15ರ ರವಿವಾರದಂದು ನಡೆದಿದೆ. ಅಂಕದಕಟ್ಟೆಯ ನಿವಾಸಿ ಸುಧೀರ್ ದೇವಾಡಿಗ ಎಂಬುವರ ಪತ್ನಿ ಸುಜಾತ(27) ಎಂಬವರು ಮೃತ ಬಾಣಂತಿಯಾಗಿದ್ದಾರೆ.
ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುಧೀರ್ ದೇವಾಡಿಗರಿಗೆ ಒಂದು ರ್ಷದ ಹಿದೆಯಷ್ಟೇ ವಿವಾಹವಾಗಿತ್ತು. ಅವರ ಪತ್ನಿ ಗರ್ಭಿಣಿಯಾದ ಬಳಿಕ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ತಪಾಸಣೆ ನಡೆಸಿದ್ದು, ಎಂಟು ತಿಂಗಳ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಸಾಮಾನ್ಯ ಹೆರಿಗೆ ಅಸಾಧ್ಯ ಎಂದು ವರದಿಯಲ್ಲಿ ಹೇಳಲಾಗಿತ್ತು ಎಂದು ಮನೆಯರು ತಿಳಿಸಿದ್ದಾರೆ. ಆದರೆ ವೈದ್ಯೆ ತಾನು ಸಾಮಾನ್ಯ ಹೆರಿಗೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ.
ಡಿಸೆಂಬರ್ 11ರಂದು ಹೆರಿಗೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸೆಂಬರ್ 13ರಂದು ಅತಿಯಾದ ಹೊಟ್ಟೆನೋವು ತಾಳಲಾರದೇ ಸಿಸೆರಿಯನ್ ಮಾಡಿಸಿ ಎಂದು ಗರ್ಭಿಣಿ ಸುಜಾತ ಹೇಳಿದ್ದರೂ ಕೂಡಾ ವೈದ್ಯೆ ನಿರ್ಲಕ್ಷ್ಯತೋರಿದ್ದು, ಸಾಮಾನ್ಯ ಹೆರಿಗೆ ಮಾಡಿಸುತ್ತೇನೆ. ವೈದ್ಯೆ ನಾನಾನೀನಾ ಎಂದು ಗದರಿದ್ದರು ಎಂದು ಸುಜಾತ ಪತಿ ಹೇಳಿದ್ದಾರೆ. ಅದರಂತೆ ಡಿಸೆಂಬರ್ 14ರಂದು ವೈದ್ಯೆ ಹೆರಿಗೆ ಮಾಡಿಸಿದ್ದು, ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಬಳಿಕ ತೀರ ರಕ್ತಸ್ರಾವವಾಗಿದ್ದು, ಇದರಿಂದ ಅಸ್ವಸ್ಥರಾದ ಸುಜಾತ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ ಗಾಬರಿಗೊಂಡ ವೈದ್ಯೆ ಇತರ ಇಬ್ಬರು ವೈದ್ಯರ ಜೊತೆಗೆ ಸುಜಾತರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಗರ್ಭಕೋಶ ತೆಗೆಯುದಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಆಸ್ಪತ್ರೆಯ ಬಿಲ್ ಸುಮಾರು ಎರಡು ಲಕ್ಷ ರುಪಾಯಿಗಳಾಗಿವೆ ಎನ್ನಲಾಗಿದ್ದು, ಕಡು ಬಡತನದಲ್ಲಿರುವ ಸುಧೀರ್ ಈ ಬೆಳವಣಿಗೆಯಿಂದ ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ. ಪತ್ನಿಯ ಸಾವಿಗೆ ಹೆರಿಗೆ ವೈದ್ಯೆ ರಜನಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದ್ದು, ಈ ಬಗ್ಗೆ ನ್ಯಾಯ ದೊರಕದೇ ಇದ್ದರೆ ವೈದ್ಯೆಯ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಇದೀಗ ಮಗು ತಾಯಿಯಿಲ್ಲದ ತಬ್ಬಲಿಯಾಗಿದೆ.