ಕುಂದಾಪುರ, ಡಿ 14 (DaijiworldNews/SM): ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸವಾಲು ಮತ್ತು ಆತಂಕ ಕಾಡುತ್ತಿದೆ. ಆದರೆ ಕೃಷಿ ವಲಯಕ್ಕೆ ಉಳಿಯಲು ಸಾಧ್ಯವಿದೆ. ಕೃಷಿ ವಲಯ ಬಲಾಢ್ಯವಾದರೆ ದೇಶವೇ ಬಲಿಷ್ಠವಾದಂತೆ. ಆಗ ಕೃಷಿ ಪ್ರಧಾನ ದೇಶ ಎನ್ನುವ ಮಾತು ಪರಿಪೂರ್ಣಗೊಳ್ಳುತ್ತದೆ. ಕೃಷಿಯನ್ನು ಹೊರತು ಪಡಿಸಿ ಬದುಕನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಸಹಕಾರ ಕ್ಷೇತ್ರ ಬೆಳೆಯಲು ಕೂಡಾ ರೈತರೇ ಕಾರಣ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ ರಿ., ಉಡುಪಿ ಜಿಲ್ಲೆ ಇವರ ವತಿಯಿಂದ ಭಾರತೀಯ ಕಿಸಾನ್ ಸಂಘದ ಸಂಸ್ಥಾಪಕ ದಿ|ದತ್ತೋಪಂತ ಠೇಂಗಡಿಯವರ ಜನ್ಮ ಶತಮಾನ ವರ್ಷಾಚರಣೆಯ ಸಂದರ್ಭದಲ್ಲಿ ಕುಂದಾಪುರದ ಶ್ರೀ ವ್ಯಾಸರಾಜ ಕಲಾ ಮಂದಿರದಲ್ಲಿ ಡಿಸೆಂಬರ್ 14ರಂದು ಆಯೋಜಿಸಲಾದ ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ವಿಶ್ವಾಸ ಇರಿಸಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯವಿದೆ. ಸಮ್ಮೇಳನಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ಬಲವರ್ಧನೆಯ ಬಗ್ಗೆ ಅರಿವು ರೈತರಲ್ಲಿ ಮೂಡಬೇಕು. ನಮ್ಮ ದೇಶದ ಕೃಷಿ ಉತ್ಪನ್ನಗಳನ್ನು ರಪ್ತು ಮಾಡುವುದಕ್ಕೇ ಒತ್ತು ಕೊಡಬೇಕು. ಬೇರೆ ದೇಶದ ಉತ್ಪನ್ನಗಳು ನಮ್ಮ ದೇಶಕ್ಕೆ ಬಂದಾಗ ಇಲ್ಲಿ ಬೆಳೆದ ಆ ಉತ್ಪನ್ನಕ್ಕೆ ಮಾರುಕಟ್ಟೆ ಕಡಿಮೆಯಾಗುತ್ತದೆ ಎಂದರು.
ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಐ.ಎನ್.ಬಸವೇ ಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಚಿನ್ನಕ್ಕಿಂತ ಅನ್ನವೇ ಶ್ರೇಷ್ಠ. ಅನ್ನಕ್ಕಿಂತ ಮಣ್ಣು ಶ್ರೇಷ್ಠ. ಇವತ್ತು ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಸ್ಥಿರ ಧಾರಣೆ ಇಲ್ಲ. ಆದರೆ ಹಾಲಿಗೆ ಮಾತ್ರ ಸ್ಥಿರ ಧಾರಣೆ ಇದೆ. ಕೃಷಿಕರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮಾಡಿದಾಗ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದರು.
ಸಮ್ಮೇಳನದಲ್ಲಿ ಸಂಘಟನೆಯ ಎಲ್ಲಾ ತಾಲೂಕು ಹಾಗೂ ಗ್ರಾಮಗಳಿಂದ ಪದಾಧಿಕಾರಿಗಳು, ರೈತರು ಪಾಲ್ಗೊಂಡಿದ್ದರು. ಸುಮಾರು ೨೦ಕ್ಕೂ ಹೆಚ್ಚು ಕೃಷಿ ಸಂಬಂಧಿತ ಮಳಿಗೆಗಳು ಭಾಗವಹಿಸಿದ್ದವು.