ಮಂಗಳೂರು, ಡಿ 14 (DaijiworldNews/SM): ಇತ್ತೀಚಿಗಷ್ಟೇ ಕಾಸರಗೋಡು ಸಂಸದರು ತುಳು ಭಾಷೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ತುಳುವಿಗೆ ಸಾಂವಿಧಾನಿಕ ಮಾನ್ಯತೆ ನೀಡಿ ೮ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದರು. ಇದೀಗ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭೆಯಲ್ಲಿ ಕಾಸರಗೋಡು ಸಂಸದರು ಮಾತನಾಡಿದ್ದ ಸಂದರ್ಭದಲ್ಲಿ ಹಲವು ಮಂದಿ ಕರಾವಳಿ ಭಾಗದ ಜನ ನಾಯಕರನ್ನು ಟೀಕಿಸಿದ್ದರು. ಕರಾವಳಿಯಲ್ಲಿದ್ದ ಸಂಸದರು ಹಾಗೂ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂಬುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕರಾವಳಿಯ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ತುಳು ಭಾಷಿಗರಿದ್ದಾರೆ. ಕಾಸರಗೋಡಿನ ಒಂದಿಷ್ಟು ಭಾಗದಲ್ಲಿ ಮಾತ್ರವೇ ತುಳು ಮಾತನಾಡುವವರಿದ್ದಾರೆ. ಆದರೆ, ಅಧಿಕ ಸಂಖ್ಯೆಯಲ್ಲಿ ಜನ ಇರುವ ಸಂಸದರು ಮೌನಕ್ಕೆ ಶರಣಾಗಿದ್ದರಿಂದ ತುಳು ಭಾಷೆಯ ಬಗ್ಗೆ ಒಲವು ಹೊಂದಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದರು.