ಹೈದರಾಬಾದ್, ಜ 18: ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ನಾನು ಮೋದಿಯ ವಿರೋಧಿ, ಅಮಿತ್ ಶಾ ವಿರೋಧಿ ಮತ್ತು ಅನಂತಕುಮಾರ್ ಹೆಗಡೆ ವಿರೋಧಿಯಾಗಿದ್ದೇನೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಮೌನ ವಹಿಸಿದ್ದಾರೆ. ಮೋದಿ, ಅಮಿತ್ ಶಾ, ಅನಂತಕುಮಾರ್ ಹೆಗಡೆ ಇವರಾರೂ ಹಿಂದೂಗಳಲ್ಲ. ಕೊಲೆಯನ್ನು ಬೆಂಬಲಿಸುವ ಯಾರೂ ಹಿಂದೂಗಳಲ್ಲ ಎಂದು ಟೀಕಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಕೆಲವರು ಸಂಭ್ರಮಿಸಿದರು. ಇಂಥ ಜನರನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ. ನಾನು ಅವರಿಗೆ ಮತ ನೀಡಿದ್ದೇನೋ ಅಥವಾ ಇಲ್ಲವೋ, ಅವರು ನನ್ನ ಪ್ರಧಾನಮಂತ್ರಿಯೇ. ಇಂತಹ ಪ್ರಕರಣಗಳ ಬಗ್ಗೆ ಪ್ರಧಾನಿ ಮಾತನಾಡಲೇಬೇಕು. ಸಂವಿಧಾನ ಬದಲಾಯಿಸುತ್ತೇವೆ ಎಂದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.