ಬೆಂಗಳೂರು, ಜ 19 : ಆಹಾರ ಇಲಾಖೆಯು ಮಾಡಿದ ಉತ್ತಮ ಕಾರ್ಯಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಅನ್ನಭಾಗ್ಯವನ್ನು ಕನ್ನಭಾಗ್ಯ ಎಂದವರಿಗೆ ಇದೀಗ ಸರಿಯಾದ ಉತ್ತರ ನೀಡಿದಂತಾಗಿದೆ. ಹಿಂದಿನ ಸರಕಾರ ಇಂತಹ ಜನಪರ ಕ್ರಮ ಕೈಗೊಂಡಿರಲಿಲ್ಲ. ಕಾಂಗ್ರೆಸ್ ಸರಕಾರ ರಚನೆಯಾದ ಬಳಿಕ ಬಡ ಜನರಿಗೆ 33.70 ಲಕ್ಷ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಪಡಿತರ ವಿತರಣೆಯಲ್ಲಿನ ಉತ್ತಮ ಬೆಳವಣಿಗೆಯಿಂದ ಈ ಪ್ರಶಸ್ತಿ ಬಂದಿದೆ ಎಂದು ಹೇಳಿದರು.
ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಆದರೆ ಅಲ್ಲಿನ ಸರಕಾರಗಳು ಅನ್ನಭಾಗ್ಯದಂತಹ ಯೋಜನೆ ಜಾರಿಗೊಳಿಸಿಲ್ಲ. ಹಾಗಾಗಿ ಇಡೀ ದೇಶಕ್ಕೆ ಕರ್ನಾಟಕದ ಅಭಿವೃದ್ಧಿ ಮಾದರಿಯಾಗುವಂತಾಗಿದೆ ಎಂದು ತಿಳಿಸಿದರು.