ಮಂಗಳೂರು, ಜ 19: ಕೆಲ ದಿನಗಳ ಹಿಂದೆ ರೇಷ್ಮಾ ಲವ್ ಜಿಹಾದ್ ಎಂದು ಸುದ್ದಿಯಲ್ಲಿದ್ದ ಪ್ರಕರಣವೊಂದಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಾರಾಷ್ಟ್ರ ಮೂಲದ ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಬಜರಂಗದಳದ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ಸುನಿಲ್ ಪಂಪ್ ವೆಲ್ ಪೊಲೀಸರ ಬಂಧನದಲ್ಲಿರುವ ಬಜರಂಗದಳ ಕಾರ್ಯಕರ್ತ. ಹೆಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಬಜರಂಗದಳದ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಆದರೆ ಯಾಕಾಗಿ ಬಂಧಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಅಪಹರಣ ಆರೋಪದಡಿಯಲ್ಲಿ ಸುನಿಲ್ ಅವರನ್ನು ಮುಂಬಯಿಯ ವಾಶಿ ಪೊಲೀಸರು ಬಂಧಿಸಿದ್ದಾರೆ.
ರೇಷ್ಮಾ ಲವ್ ಜಿಹಾದ್ ಪ್ರಕರಣ:
ರೇಷ್ಮಾ ಮಂಗಳೂರಿನ ಕಾನೂನು ವಿದ್ಯಾರ್ಥಿನಿ. ಈಕೆಗೆ ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಇಕ್ಬಾಲ್ ಅನ್ನುವ ವ್ಯಕ್ತಿಯ ಪರಿಚಯವಾಗಿತ್ತು. ಬರಬರುತ್ತಾ ಪರಿಚಯ ಪ್ರೀತಿಗೆ ಬದಲಾಗಿ, ಮುಂಬೈಗೆ ತೆರಳಿದ ಜೋಡಿ ಅಲ್ಲಿಯೇ ವಿವಾಹವಾಗಿದ್ದರು. ಈ ವೇಳೆ ರೇಷ್ಮಾ ಪೋಷಕರು ಇಕ್ಬಾಲ್ ವಿರುದ್ಧ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ರೇಷ್ಮಾಳನ್ನು ಮುಂಬೈನಿಂದ ವಪಾಸ್ ಕರೆ ತಂದಿದ್ದರು.
ಇದರಿಂದ ಆಕ್ರೋಶಗೊಂಡ ಮಹಮ್ಮದ್ ಇಕ್ಬಾಲ್ ಮಹಾರಾಷ್ಟ್ರದ ಹೈಕೋರ್ಟ್ ನಲ್ಲಿ ರೇಷ್ಮಾಳನ್ನು ಅಪಹರಣ ಮಾಡಿದ್ದಾರೆ ಎಂದು ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದು, ಪೊಲೀಸರು ರೇಷ್ಮಾಳನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ರೇಷ್ಮಾಳನ್ನು ಪತ್ತೆ ಹಚ್ಚುವಲ್ಲಿ ಮಹಾರಾಷ್ಟ್ರ ಪೊಲೀಸರು ವಿಫಲರಾಗಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಬಜರಂಗದಳದ ಕಾರ್ಯಕರ್ತ ಸುನಿಲ್ ಪಂಪ್ ವೆಲ್ ನನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕೆ ಬಂಧಿಸಿದ್ದಾರೆ ತನಿಖೆಯಿಂದ ತಿಳಿದುಬರಬೇಕಾಗಿದೆ.