ಬಂಟ್ವಾಳ, ಡಿ 13 (DaijiworldNews/SM): ಜಾನುವಾರುಗಳ ಕಳವು ಪ್ರಕರಣದ ಆರೋಪದ ಮೇರೆಗೆ ಪೊಲೀಸರು ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೋಳಂತೂರು ಗ್ರಾಮದ ನಿವಾಸಿ ನಜಾದುದ್ದೀನ್ ಹಾಗೂ ಅರ್ಕುಳ ಗ್ರಾಮದ ಅಬ್ದುಲ್ ಸಲಾಂ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಕಾರು, ದನವೊಂದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ:
ನ. 28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡುವಿನಲ್ಲಿ ಸಜೀಪದಿಂದ ಕಂಚಿನಡ್ಕಕ್ಕೆ ತೆರಳುವ ರಸ್ತೆಯಲ್ಲಿ ದನಗಳ ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸೆಂಬರ್ 12ರಂದು ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಿದ ಓಮ್ನಿ ಕಾರು, ಕಳವು ಮಾಡಿದ್ದ ಹಸುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆ ಮಾತ್ರವಲ್ಲದೆ, ಕಾರಾಜೆ ಮತ್ತು ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರಿನಲ್ಲಿ ದನವನ್ನು ಕಳವು ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಸ್ಸೈ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ವಿಟ್ಲ ಠಾಣಾ ಪ್ರೊಬೇಷನರಿ ಎಸ್ಸೈ ವಿನೋದ್, ಸಿಬ್ಬಂದಿಗಳಾದ ಜನಾರ್ದನ, ನಝೀರ್, ಸುರೇಶ್, ಪ್ರಸನ್ನ, ಜಯಕುಮಾರ್, ಪ್ರತಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.