ಬೆಳ್ತಂಗಡಿ, ಡಿ 13 (DaijiworldNews/SM): ಇಲ್ಲಿನ ಶಿಬಾಜೆ ಗ್ರಾಮದ ಪೆರ್ಲ ಶಾಲೆಯ ಮಕ್ಕಳು ಕುಡಿಯುವ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಹಲವು ದಿನ ಕಳೆದರೂ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಈ ಬಾವಿಯ ನೀರನ್ನು ಕುಡಿದಿದ್ದಾರೆ. ಇದರಲ್ಲಿ ಸುಮಾರು ಎಂಟು ವಿದ್ಯಾರ್ಥಿಗಳು ತಕ್ಷಣ ಅಸ್ವಸ್ಥರಾಗಿದ್ದರು. ಇವರ ಪೈಕಿ ನಾಲ್ಕು ವಿದ್ಯಾರ್ಥಿಗಳನ್ನು ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲು ಮಾಡಿದರೆ, ಉಳಿದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾತ್ರವಲ್ಲದೆ ಈ ಬಗ್ಗೆ ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿಯನ್ನು ನೀಡಿದ್ದರು. ಭಯಭೀತರಾದ ಪಾಲಕರು ತಮಗೆ ನ್ಯಾಯ ಸಿಗದೇ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದರು.
ಸುಡು ಬಿಸಿಲಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ:
ಆದರೆ ಘಟನೆ ನಡೆದು ಎರಡು ವಾರ ಕಳೆದರೂ ಕೂಡ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಹಾಗೂ ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ಲ ಎಂಬುದಾಗಿ ಆರೋಪಿಸಿ ಮಕ್ಕಳು ಹಾಗೂ ಪೋಷಕರು ಸುಡು ಬಿಸಿಲಿನಲ್ಲೂ ಬೀದಿಗಿಳಿದು ಪ್ರತಿಭಟನೆ ಮಾಡಿದರು. ಪ್ರತಿಭಟನೆ ಬಗ್ಗೆ ಈ ಹಿಂದೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭಗೊಂಡರೂ ಕೂಡ ಅಧಿಕಾರಿಗಳು ಬಂದಿರಲಿಲ್ಲ. ಮಧ್ಯಾಹ್ನದ ನಂತರ ಆಗಮಿಸಿದ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ತನಿಖೆ ಸಮರ್ಪಕವಾಗಿ ಮಾಡುತ್ತಿಲ್ಲ ಮತ್ತು ತನಿಖೆಗೆ ಒತ್ತಡ ತರುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಬೆಳ್ತಂಗಡಿ ಶಾಸಕರು, ಧರ್ಮಸ್ಥಳ ಪೋಲೀಸರು, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಮುಖ್ಯೋಪಾಧ್ಯಾಯರು ಸೇರಿದಂತೆ ಹಲವರ ವಿರುದ್ಧ ಘೋಷಣೆಗಳನ್ನು ಕೂಗಿದರು.