ಕಾಸರಗೋಡು,ಡಿ 13(Daijiworld News/MSP): ತುಳು ಭಾಷೆ ಮತ್ತು ಸಂಸ್ಕೃತಿಯ ಪುನಶ್ಚೇತನ ಉದ್ದೇಶದಿಂದ ಕೇರಳ ತುಳು ಅಕಾಡೆಮಿ ವತಿಯಿಂದ ಡಿ.17 ಮತ್ತು 18 ರಂದು ನಗರದ ನೆಲ್ಲಿಕುಂಜೆ ಲಲಿತ ಕಲಾಸದನದಲ್ಲಿ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ನಡೆಯಲಿದೆ.
ತುಳು ಸಂಶೋಧಕ, ಅಕಾಡೆಮಿಯ ಸ್ಥಾಪಕಾಧ್ಯಕ್ಷ ದಿ.ಡಾ.ವೆಂಕಟರಾಜ ಪುಣಿಂಚಿತ್ತಾಯ ಅವರ ಹೆಸರಿನ ವೇದಿಕೆಯಲ್ಲಿ ಈ ಸಮಾರಂಭ ಜರುಗಲಿದೆ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ. ಸಾಲಿಯಾನ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡಿನಲ್ಲಿ ಪ್ರಥಮ ಬಾರಿಗೆ ವಿಚಾರ ಸಂಕಿರಣ ನಡೆಯುತ್ತಿದ್ದು , ೧೭ರಂದು ಅಂದು ಬೆಳಿಗ್ಗೆ ಹತ್ತು ಗಂಟೆಗೆ ಸಚಿವ ಎಂ.ಎಂ.ಮಣಿ ವಿಚಾರಸಂಕಿರಣವನ್ನು ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ರವರು ಅಕಾಡೆಮಿಯ ತ್ರೈ ಮಾಸ ಪತ್ರಿಕೆ "ತೆಂಬೆರೆ"ಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸುವರು. ಹಾವೇರಿ ಜನಪದ ವಿವಿಯ ನಿಕಟಪೂರ್ವ ಉಪಕುಲಪತಿ ಡಾ.ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡುವರು. ಶಾಸಕರಾದ ಎಂ.ಸಿ.ಕಮರುದ್ದೀನ್, ಕೆ.ಕುಂಞಿರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ನಗರಸಭೆ ಅಧ್ಯಕ್ಷ ಬಿಫಾತಿಮಾ ಇಬ್ರಾಹಿಂ, ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ.ವಿ.ಪಿ.ಪಿ.ಮುಸ್ತಫಾ, ಕೆ.ಶ್ರೀಕಾಂತ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಕೆ.ಆರ್.ಜಯಾನಂದ, ನಗರಸಭೆ ಸದಸ್ಯ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿರುವರು.
ವಿವಿಧ ವಲಯಗಳ ಸಾಧಕರಾದ ಎಂ.ವಿ..ಬಾಲಕೃಷ್ಣ ಮಾಸ್ಟರ್, ಎ.ಸುಬ್ಬಯ್ಯ ರೈ, ಫಾದರ್ ಸಂತೋಷ್ ಲೋಬೋ, ಎಸ್.ವಿ.ಭಟ್, ರಾಜಶ್ರೀ ಟಿ. ರೈ ಅವರಿಗೆ ಅಭಿನಂದನೆ ನಡೆಯಲಿದೆ. ನಂತರ ಎರಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ನಾನಾ ವಿಚಾರಗಳ ಬಗ್ಗೆ ವಿದ್ವಾಂಸರಾದ ನಾರಾಯಣ ದೇಲಂಪಾಡಿ, ಡಾ.ಕಿಶೋರ್ ಕುಮಾರ್ ರೈ ಶೇನಿ, ಡಾ.ರಾಜೇಶ್ ಬೆಜ್ಜಂಗಳ ಉಪನ್ಯಾಸ ಮಂಡಿಸುವರು. ಸಂವಾದ ನಡೆಯಲಿದ್ದು, ವಿವಿಧ ವಿದ್ವಾಂಸರು ಭಾಗವಹಿಸುವರು.
ಕಾರ್ಯಕ್ರಮ ಅಂಗವಾಗಿ 17ರಂದು ಬೆಳಗ್ಗೆ ರಸಪ್ರಶ್ನೆ ಸ್ಪರ್ಧೆ, 10 ಗಂಟೆಗೆ ಗೋಳಿಯಡ್ಕ, ಕನ್ಯಪ್ಪಾಡಿ, ಚೋಮನಲಿಕೆ ಇವರಿಂದ ಆಟಿ ಕಳೆಂಜ, ಸಂಜೆ 4 ಗಂಟೆಗೆ ಪ್ರಬಂಧ ಸ್ಪರ್ಧೆ ಜರುಗಲಿದೆ. 18ರಂದು ಬೆಳಗ್ಗೆ ತುಳು ಲಿಪಿಕಲಿಕಾ ಶಿಬಿರ ನಡೆಯಲಿದೆ. ಸಾಹಿತಿ ಪ್ರೊ.ಸುಕನ್ಯಾ ಬಿ. ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಪಿ.ಕರುಣಾಕರನ್ ತುಳು ಲಿಪಿ ಪುಸ್ತಕ ಬಿಡುಗಡೆಗೊಳಿಸುವರು.
18ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮುಖ್ಯ ಅತಿಥಿಯಾಗಿರುವರು. ಮಾಜಿ ಶಾಸಕ ಸಿ.ಎಚ್.ಕುಂಞಂಬು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು. ಹಿರಿಯ ವಿದ್ವಾಂಸ ಮಲಾರ್ ಜಯರಾಮ ರೈ ಸಮಾರೋಪ ಭಾಷಣ ಮಾಡುವರು. ಎಣ್ಮಕಜೆ ಗ್ರಾಮಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಪೆರ್ಲ, ಜಿಲ್ಲಾ ವಾರ್ತಾ ಇಲಾ ಖಾ ಅಧಿಕಾರಿ ಮಧುಸೂದನನ್ ಎಂ., ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಮಾಜಿ ಅಧ್ಯಕ್ಷ ಎಂ. ಶಂಕರ ರೈ ಮಾಸ್ಟರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ತಾಲೂಕು ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ದಾಮೋದರನ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ 17ರಂದು ಮಧ್ಯಾಹ್ನ 12.30ಕ್ಕೆ ಪುತ್ತೂರು ಈಶ ಲಹರಿ ಕಲಾ ಕೂಟ ಇವರಿಂದ ಕಂಗಿಲು ನಲಿಕೆ, ಸಂಜೆ 4.30ರಿಂದ ಯಕ್ಷಗುರು ದಿವಾಣ ಶಿವಶಂಕರ ಭಟ್ ಬಳಗದಿಂದ ತುಳು ಯಕ್ಷಗಾನ ಭಾಗವತಿಗೆ, 18ರಂದು ಮಧ್ಯಾಹ್ನ 12.30ಕ್ಕೆ ಶಂಕರ ಸ್ವಾಮಿಕೃಪಾ ಬಳಗದಿಂದ ತುಳು ಕಬಿತೆ, ಪಾಡ್ದನ, ಸಂಜೆ 4.30ರಿಂದ ತುಳು ಜನಪದ ನೃತ್ಯ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಲ, ಸದಸ್ಯರಾದ ರಾಧಾಕೃಷ್ಣ ಉಳಿಯತ್ತಡ್ಕ, ಸಚಿತಾ ರೈ ಪೆರ್ಲ ಉಪಸ್ಥಿತರಿದ್ದರು.