ಪುತ್ತೂರು, ಡಿ 12 (Daijiworld News/MB) : ಬೆಳ್ಳಿಪಾಡಿಯ ಕಠಾರದ ಪ್ರದೇಶದಲ್ಲಿ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಯೊಬ್ಬಳ ಮೇಲೆ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಬಜತ್ತೂರು ಗ್ರಾಮದ ಗಾಣದಮೂಲೆ ನಿವಾಸಿ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್(19), ಪೆರ್ನೆ ರಾಜಶ್ರೀ ಕೃಪದ ನಾಗೇಶ್ ನಾಯ್ಕ್ ಎಂಬವರ ಪುತ್ರ ಪ್ರಜ್ವಲ್ (19), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಕಾಂತಪ್ಪ ಗೌಡರವರ ಪುತ್ರ ಸುನಿಲ್(19), ಪೆರ್ನೆ ಕಡಂಬು ನಿವಾಸಿ ಸದಾಶಿವ ಎಂಬವರ ಪುತ್ರ ಕಿಶನ್ (19), ಹಾಗೂ ಬಂಟ್ವಾಳ ಬರಿಮಾರು ಗ್ರಾಮದ ಬಲ್ಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಖ್ಯಾತ್ (19)ಗೆ ಜಾಮೀನು ಮಂಜೂರಾಗಿದೆ. ಈ ಪೈಕಿ ಆರೋಪಿ ಪ್ರಜ್ವಲ್ಗೆ ರಾಜ್ಯ ಉಚ್ಛ ನ್ಯಾಯಾಲಯ ಈ ಹಿಂದೆಯೇ ಜಾಮೀನು ನೀಡಿತ್ತು.
ಆರೋಪಿಗಳಾದ ಕಿಶನ್ ಹಾಗೂ ಗುರುನಂದನ್ ಪರ ವಕೀಲ ಮಹೇಶ್ ಕಜೆ, ಸುನಿಲ್ ಪರ ರಾಜಶೇಖರ ಇಲ್ಯಾರ್, ಪ್ರಖ್ಯಾತ್ ಪರ ಅರುಣ್ ಶ್ಯಾಮ್ ವಾದ ಮಾಡಿದ್ದಾರೆ. ಹಾಗೆಯೇ ಈ ಹಿಂದೆ ಜಾಮೀನು ಪಡೆದು ಕೊಂಡಿದ್ದ ಪ್ರಜ್ವಲ್ ಪರ ಅರುಣ್ಶ್ಯಾಮ್ ಹಾಗೂ ಮಹೇಶ್ ಕಜೆ ವಾದಿಸಿದ್ದರು.
ಮಾರ್ಚ್ ತಿಂಗಳಲ್ಲಿ ಆರೋಪಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆದು ಕೊಂಡು ಹೋಗಿ ಬೆಳ್ಳಿಪ್ಪಾಡಿಯ ಕಠಾರ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಗೆ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಷ್ಟು ಮಾತ್ರವಲ್ಲದೇ ಮೊಬೈಲ್ ಫೋನ್ನಲ್ಲಿ ಚಿತ್ರೀಕರಣ ಮಾಡಿದ್ದರು. ಈ ವಿಷಯವನ್ನು ಯಾರಿಗಾದರೂ ತಿಳಿಸಿದಂತೆ ಜೀವ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು.
ಈ ಅತ್ಯಾಚಾರದ ವಿಡಿಯೋ ಜುಲೈ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸು ದಾಖಲಿಸಲಾಗಿತ್ತು. ನಂತರ ಸಂತ್ರಸ್ಥ ವಿದ್ಯಾರ್ಥಿನಿ ನೀಡಿದ ದೂರಿನಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಹಾಗೆಯೇ ಅತ್ಯಾಚಾರ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಕುರಿತು ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಒಟ್ಟು 11 ಮಂದಿಯನ್ನು ಬಂಧಿಸಿದ್ದರು, ನಂತರ ಈ 11 ಆರೋಪಿಗಳ ವಿರುದ್ಧ ಪುತ್ತೂರು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಚಾರ್ಚ್ ಶೀಟ್ ಸಲ್ಲಿಸಲಾಗಿತ್ತು.
ಅತ್ಯಾಚಾರ ಆರೋಪಿಗಳು ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದೀಗ ಹೈಕೋರ್ಟ್ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ.