ಮಂಗಳೂರು, ಜ 18: ದೇಶದ ಪ್ರಸಿದ್ಧ ವಿಮಾನ ನಿಲ್ದಾಣಗಳಲ್ಲೊಂದಾಗಿರುವ ನಗರದ ಬಜ್ಪೆ ಏರ್ ಪೋರ್ಟ್ ಇದೀಗ ವಿವಾದದ ಸುಳಿಗೆ ಸಿಲುಕಿದೆ. ವಿಮಾನ ನಿಲ್ದಾಣ ತೆಗೆದುಕೊಂಡಿರುವ ನಿರ್ಧಾರದಿಂದ ಜನರು ಹೋರಾಟದ ಹಾದಿ ಹಿಡಿದಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಹಂತದ ರನ್ ವೇ ಮುಗಿದಿದ್ದು, ಇದೀಗ ಮೂರನೇ ಹಂತದ ರನ್ ವೇ ಕಾಮಗಾರಿಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಮೂರನೇ ಹಂತದ ಕಾಮಗಾರಿಗೆ 37 ಎಕರೆ ಪ್ರದೇಶದ 22 ಮನೆಗಳು ಬಲಿಯಾಗಲಿವೆ. ಹಾಗೆಯೇ ರನ್ ವೇಗೆ ಸಮಾಂತರವಾಗಿ 120 ಮೀಟರ್ ಗೆ ಭೂಮಿ ಸ್ವಾಧೀನ ಪಡಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ, ಸ್ಥಳೀಯ ಪಂಚಾಯತ್ ಮುಖಾಂತರ ಆದೇಶ ಹೊರಡಿಸಿದೆ.
ಈ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯಿಂದ ಇಲ್ಲಿನ ಜನರು ಅತಂತ್ರರಾಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಇಲ್ಲಿನ ಜನರಿಗೆ ನೀಡಿರೋ ಪರಿಹಾರಕ್ಕೂ ಇವರ ಭೂಮಿ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಸರ್ಕಾರ ಈ ಪರಿಹಾರದಿಂದ ಇಲ್ಲಿನ ಸ್ಥಳೀಯರು ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಹಾಗೂ ಮರಳಿ ಭೂಮಿ ಖರೀದಿಸಲು ಸಾಧ್ಯವಿಲ್ಲ.
ಈಪರಿಹಾರಮೊತ್ತ ಕೊಳಂಬೆಯಲ್ಲಿ ಪ್ರತಿ ಸೆಂಟ್ಸ್ ಗೆ 23, 283 ರೂಪಾಯಿ ಹಾಗೂ ಅದ್ಯಪಾಡಿಯಲ್ಲಿ ಪ್ರತೀ ಸೆಂಟ್ಸ್ ಗೆ 19,387 ರೂಪಾಯಿ ಇದೆ. ಆದರೆ ಸರ್ಕಾರ ನೀಡಿರುವ ಪರಿಹಾರ ಇದಕ್ಕಿಂತಲೂ ಕಡಿಮೆ. ಹೀಗಾಗಿ ಜಿಲ್ಲಾಡಳಿತ ನಿಗದಿ ಮಾಡಿದ ಪರಿಹಾರ ಧನವನ್ನು ಸ್ವೀಕರಿಸಲು ಇಲ್ಲಿನ ಜನರು ಒಪ್ಪುತ್ತಿಲ್ಲ.
ಕಳೆದ ಎರಡು ಹಂತದ ರನ್ ವೇ ಕಾಮಗಾರಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ಸರಕಾರವು ಉತ್ತಮ ರೀತಿಯ ಪರಿಹಾರ ನೀಡಿತ್ತು. ಇದರಲ್ಲೂ ಕೂಡಾ ಕೆಲವೊಂದು ಲೋಪದೋಷಗಳಿದ್ದವು. ಆದರೆ ಮೂರನೇ ಹಂತದ ಕಾಮಗಾರಿಯಲ್ಲಿ ಸರಕಾರ ನೀಡುವ ಪರಿಹಾರ ಭಾರೀ ಕಡಿಮೆಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.