ಮಂಗಳೂರು, ಡಿ 11 (Daijiworld News/MB) : ಮೀನುಗಾರಿಕಾ ಇಲಾಖೆಯು ಮತ್ಸ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೀನುಗಾರಿರೆಯಲ್ಲಿ ಹಿಡಿಯಬಹುದಾದ ಮೀನಿನ ಗಾತ್ರವನ್ನು ನಿಗದಿಪಡಿಸಿದ್ದು ನಿಗದಿತ ಗಾತ್ರಕ್ಕಿಂತ ಸಣ್ಣ ಮೀನನ್ನು ಹಿಡಿದರೆ ಕಾನೂನು ಮೂಲಕ ಶಿಕ್ಷೆ ನೀಡಲಾಗುತ್ತದೆ.
ಮೀನುಗಾರಿಕೆಯಲ್ಲಿ ದೊರೆತ ಸಣ್ಣ ಮೀನನ್ನು ಫಿಶ್ಮಿಲ್ ಪ್ಲಾಂಟ್, ಸುರುಮಿ ಘಟಕಗಳಿಗೆ ಕಚ್ಚಾ ವಸ್ತುವಾಗಿ ಉಪಯೋಗಿಸಲಾಗುತ್ತಿದ್ದು ಈ ಮೀನನ್ನು ಹಿಡಿಯುವುದರಿಂದ ಮುಂದೆ ಮೀನಿನ ಸಂಪತ್ತು ವೃದ್ಧಿಗೆ ತೊಂದರೆ ಆಗಬಹುದು. ಹಾಗೆಯೇ ಮೀನಿನ ಉತ್ಪಾದನೆಯು ಕೂಡಾ ಕುಂಠಿತವಾಗಬಹುದು. ಈ ಹಿನ್ನಲೆಯಲ್ಲಿ ಪ್ರಭೇದಕ್ಕೆ ಅನುಗುಣವಾಗಿ ಗಾತ್ರವನ್ನು ನಿಗದಿ ಮಾಡಲಾಗಿದೆ.
ಬಂಗುಡೆ-14 ಸೆಂ.ಮೀ., ಬೂತಾಯಿ-10ಸೆಂ.ಮೀ., ಅಂಜಲ್ - 20ಸೆಂ.ಮೀ., ಮುರು ಮೀನು-18 ಸೆಂ.ಮೀ., ಕಲ್ಲೂರು-15 ಸೆಂ.ಮೀ., ಕೊಲ್ಲತರು-7 ಸೆಂ.ಮೀ., ಪಾಂಬೊಲ್-46 ಸೆಂ.ಮೀ., ಕಪ್ಪು ಮಾಂಜಿ-17 ಸೆಂ.ಮೀ., ಕೇದಾರ್-31 ಸೆಂ.ಮೀ., ಕಾಣೆ-11.3 ಸೆಂ.ಮೀ., ಮದ್ಮಲ್-12 ಸೆಂ.ಮೀ., ಡಿಸ್ಕೊ-17 ಸೆಂ.ಮೀ., ಬೊಳೆಂಜಿರ್-8.0 ಸೆಂ.ಮೀ., ಅಡೆ ಮೀನು- 10ಸೆಂ.ಮೀ., ನಂಗು-9 ಸೆಂ.ಮೀ., ಬಿಳಿ ಮಾಂಜಿ-13 ಸೆಂ.ಮೀ., ಕೊಡ್ಡಾಯಿ-17 ಸೆಂ.ಮೀ., ಕೋಲುಬಂಡಾಸ್, ಡಿಎಂಎಲ್, ಕಪ್ಪೆ ಬಂಡಾಸ್-11 ಸೆಂ.ಮೀ. ಇರಬೇಕೆಂದು ನಿಗದಿ ಮಾಡಲಾಗಿದೆ.
ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇದ್ದಲ್ಲಿ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಲಾಗಿದೆ.