ಉಡುಪಿ, ಡಿ (DaijiworldNews/SM): ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಡಿ ಚಾನೆಲ್ಗಳು ನೋಂದಣಿಯಾಗಿರಬೇಕಿದೆ. ಆದರೆ, ಇತ್ತೀಚೆಗೆ ಟಿವಿ ಚಾನೆಲ್ಗಳ ಹೆಸರಿನಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕರನ್ನು ಬ್ಲಾಕ್ಮೇಲ್ ಮಾಡುತ್ತಿರುವ ಕೆಲವು ನಕಲಿ ಚಾನೆಲ್ಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಚಾನೆಲ್ಗಳ ದಾಖಲೆ ಪರಿಶೀಲನೆ ನಡೆಸಿ, ನಕಲಿ ಚಾನೆಲ್ಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಅವರು ವಾರ್ತಾ ಇಲಾಖೆಗೆ ಸೂಚಿಸಿದರು.
ಕೇಬಲ್ ಆಪರೇಟರ್ ಗಳು ನೋಂದಣಿ ಕಡ್ಡಾಯ:
ಜಿಲ್ಲೆಯಲ್ಲಿರುವ ಎಲ್ಲಾ ಕೇಬಲ್ ಆಪರೇಟರ್ ಗಳು ನಿಯಮನುಸಾರ ಪ್ರಧಾನ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಲೇಬೇಕು. ಈ ಕುರಿತು ಅಂಚೆ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು. ನೋಂದಣಿಯಾಗದ ಕೇಬಲ್ ಆಪರೇಟರ್ ಗಳು ಕೂಡಲೇ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೇ, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಿ, ಸಂಬಂಧಪಟ್ಟ ಕೇಬಲ್ ಉಪಕರಣಗಳನ್ನು ವಶಪಡಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯನ್ನು ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್ ಗಳ ಉಪಕರಣವನ್ನು ವಶಪಡಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಈ ಕಾಯಿದೆಯ ಅಧಿಕೃತ ಅಧಿಕಾರಿಗಳು ಹೊಂದಿರುತ್ತಾರೆ ಎಂದು ಅವರು ಎಚ್ಚರಿಸಿದರು.