ಕುಂದಾಪುರ, ಡಿ 10 (DaijiworldNews/SM): ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಡಾ. ರಾಬರ್ಟ್ ರೆಬೆಲ್ಲೋ ಅವರ ಅಮಾನತು ಆದೇಶಕ್ಕೆ ಕರ್ನಾಟಕ ನ್ಯಾಯ ಮಂಡಳಿ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ಬಂದಾಗ ರಾಬಟ್ ರೆಬೆಬಲ್ಲೋ ಅವರ ಕೋಣೆಗೆ ಕೀಲಿ ಹಾಕಿತ್ತು. ಇದರಿಂದಾಗಿ ರಾಬರ್ಟ್ ಕೆಲ ಕಾಲ ಹೊರಗೆ ನಿಲ್ಲಬೇಕಾದ ಪ್ರಸಂಗ ಎದುರಾಯಿತು. ಬಳಿಕ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಬಂದ ಬಳಿಕ ಕಚೇರಿಯ ಬೀಗ ತೆಗೆಯಲಾಯಿತು. ಈ ಸಂದರ್ಭ ಸ್ಥಳೀಯ ಮುಖಂಡರು ಅವರನ್ನು ಆಸ್ಪತ್ರೆಯಲ್ಲಿ ಹೂ ಗುಚ್ಛ ನೀಡಿ ಸ್ವಾಗಿತಿಸಿದರು.
ಬಳಿಕ ಮಾತನಾಡಿದ ಅವರು, ನಾನು ಆಸ್ಪತ್ರೆಯ ವೈದ್ಯ, ಸಿಬ್ಬಂದಿಗಳ ಜೊತೆಗೆ ಹೊಂದಿಕೊಂಡು ಹೋಗುತ್ತೇನೆ. ಆದರೆ ವೈದ್ಯರು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಗೌರವಿಸಿ ಸೇವೆ ಸಲ್ಲಿಸಬೇಕು. ಸರ್ಕಾರ ನೀಡುವ ವೇತನವನ್ನು ಪಡೆಯುವ ಎಲ್ಲಾ ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎನ್ನುವ ಇರಾದೆ ನನ್ನದು. ನನ್ನ ಅವಧಿಯಲ್ಲಿ ಸಾರ್ವಜನಿಕರು ಆಸ್ಪತ್ರೆಯ ಬಗ್ಗೆ ದೂರಿದ್ದು ಇಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕೆಲವರು ಮೌಖಕವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ನನ್ನನ್ನು ಅಮಾನತು ಮಾಡಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಲಿಖಿತ ದೂರು ಇರಲಿಲ್ಲ. ಮತ್ತು ನಾನು ಯಾವುದೇ ತಪ್ಪು ಮಾಡಿರಲಿಲ್ಲ. ಅದಕ್ಕಾಗಿ ನಾನು ಕರ್ನಾಟಕ ನ್ಯಾಯ ಮಂಡಳಿ ಮೊರೆ ಹೋಗಿದ್ದು, ಆದೇಶಕ್ಕೆ ತಡೆ ನೀಡಲಾಗಿದೆ ಎಂದರು.
ನಾನು ಆಸ್ಪತ್ರೆಯ ಅಭಿವೃದ್ಧಿಯ ಬಗ್ಗೆ ಹೋರಾಡುತ್ತೇನೆ. ನಾನು ಇಲ್ಲಿಂದ ಹೋಗುವುದಾದರೆ ಒಳ್ಳೆಯ ರೀತಿಯಲ್ಲಿ ಹೋಗುತ್ತೇನೆ. ನನ್ನ ಮೇಲೆ ಕಪ್ಪು ಚುಕ್ಕಿ ಇಟ್ಟುಕೊಂಡು ನಾನು ಹೋಗಬೇಕು ಎಂದು ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಆದರೆ ಆದು ನಡೆಯುವುದಿಲ್ಲ ಎಂದು ಆಸ್ಪತ್ರೆಯ ಕೆಲವು ವೈದ್ಯರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.