ಕಾಸರಗೋಡು, ಡಿ 10 (Daijiworld News/MSP): ಕಬ್ಬಿಣದ ಸ್ಟ್ಯಾಂಡ್ ತಲೆ ಮೇಲೆ ಬಿದ್ದ ಪರಿಣಾಮ ಖಾಸಗಿ ಸಂಸ್ಥೆಯೊಂದರಲ್ಲಿ ಫೈಯರ್ & ಸೇಫ್ಟಿ ಆಫೀಸರ್ ಆಗಿದ್ದ ಕಾಸರಗೋಡು ಮೂಲದ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ನಡೆದಿದೆ.
ಮೃತ ಯುವಕನನ್ನು ಕಾಸರಗೋಡಿನ ಮಿಂಚಿನಡ್ಕ ನಿವಾಸಿ ಚೈತನ್ಯ ಕೃಷ್ಣ (23) ಎಂದು ಗುರುತಿಸಲಾಗಿದೆ. ಔರಂಗಬಾದ್ ನಲ್ಲಿ ಖಾಸಗಿ ಸಂಸ್ಥೆಯಲ್ಲಿ ಫೈಯರ್ & ಸೇಫ್ಟಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚೈತನ್ಯ ಶನಿವಾರ ಕರ್ತವ್ಯದಲ್ಲಿ ನಿರತರಾಗಿದ್ದ ಸಂದರ್ಭ ಮೂರನೇ ಮಹಡಿ ಮೇಲಿಂದ ಕಬ್ಬಿಣದ ಸ್ಟ್ಯಾಂಡ್ ಉರುಳಿ ತಲೆ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮಂಗಳವಾರ ಸಂಜೆ ವೇಳೆಗೆ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗುವು ಎಂದು ತಿಳಿದುಬಂದಿದ್ದು, ಬುಧವಾರ ಸಂಜೆ ವೇಳೆಗೆ ಮೃತದೇಹ ಕಾಸರಗೋಡು ತಲುಪುವ ಸಾಧ್ಯತೆ ಇದೆ.