ಧರ್ಮಸ್ಥಳ, ಜ 18: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ದೇಗುಲ, ಬಸದಿ, ಚರ್ಚ್ ಮತ್ತು ಮಸೀದಿಗಳ ಆವರಣಗಳನ್ನು ಸ್ವಚ್ಛಗೊಳಿಸುವ ವಿನೂತನ ಆಂದೋಲನ ಯಶಸ್ವಿಯಾಗಿ ನಡೆದಿದೆ.
ನಮ್ಮ ಸುತ್ತಲಿರುವ ಶ್ರದ್ಧಾ ಕೇಂದ್ರಗಳು ಸ್ವಚ್ಛತೆ ಮತ್ತು ಪರಿಸರ ಶಾಂತಿಯಿಂದ ಕೂಡಿರುವಲ್ಲಿ ಕೈಜೋಡಿಸಬೇಕು. ನಿರಂತರವಾಗಿ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿತ್ತು. ಬೆಂಗಳೂರು, ದೊಡ್ಡಬಳ್ಳಾಪುರ, ಬಂಗಾರಪೇಟೆ, ತುಮಕೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆದ ವಿನೂತನ ಸ್ವಚ್ಛತಾ ಆಂದೋಲನ ಮುಕ್ತಾಯ ಕಂಡಿದ್ದು, ರಾಜ್ಯಾದ್ಯಂತ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.
ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಉದ್ದೇಶದೊಮದಿಗೆ ಆರಂಭವಾದ ಈ ಅಭಿಯಾನದಲ್ಲಿ ದೇವಳದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಜನಜಾಗೃತಿ, ನವಜೀವನ ಸಮಿತಿ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ವರ್ಗದವರು, ಊರಗಣ್ಯರು, ಗ್ರಾಪಂ ಸದಸ್ಯರು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.
4500ಕ್ಕೂ ಮಿಕ್ಕಿದ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿತ್ತು. ದೇವಳದ ಸುತ್ತಮುತ್ತಲಿನ ಬೇಡವಾದ ಗಿಡಗಳು, ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ದೇವಳದ ಒಳಗೂ ಮತ್ತು ಹೊರಗೂ ಸ್ವಚ್ಛಗೊಳಿಸಲಾಗಿದ್ದು, ಮಂದಿರ, ಮಸೀದಿ, ಚರ್ಚ್ ಹಾಗೂ ಬಸದಿಗಳಲ್ಲಿ ಸಾಮೂಹಿಕವಾಗಿ ಭಕ್ತಾದಿಗಳು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.