ಉಡುಪಿ, ಜ 18: ಪಲಿಮಾರು ಹೃಷಿಕೇಶ ಮಠ ಸಂಸ್ಥಾನದ ಮೂವತ್ತನೇ ಯತಿ ವಿದ್ಯಾಧೀಶ ತೀರ್ಥ ಶ್ರೀಗಳು ಎರಡನೇ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠವನ್ನೇರಿದ್ದಾರೆ.
ಹೇಮಲಂಬಿ ಸಂವತ್ಸರದ ಮಾಘ ಮಾಸ ಶುಕ್ಲ ಪಾಡ್ಯದ ದಿನ, ನಸುಕಿನ ಎರಡು ಗಂಟೆಗೆ ಆರಂಭವಾದ ಪರ್ಯಾಯ ಪೂಜಾ ವಿಧಿವಿಧಾನಗಳನ್ನು ಮುಗಿಸಿ, ರಥಬೀದಿಗೆ ಆಗಮಿಸಿದ ಪಲಿಮಾರು ಶ್ರೀಗಳನ್ನು ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು ಕೃಷ್ಣಮಠಕ್ಕೆ ಸ್ವಾಗತಿಸಿದ್ದಾರೆ.
ಕನಕನ ಕಿಂಡಿಯ ಮೂಲಕ ಪಲಿಮಾರು ಶ್ರೀಗಳು ಕೃಷ್ಣನ ದರ್ಶನ ಪಡೆದು, ನಂತರ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ ಪಡೆದರು. ಸುಮಾರು 6.35ಕ್ಕೆ ಕೃಷ್ಣಮಠಕ್ಕೆ ಪ್ರವೇಶಿಸಿದ ಪಲಿಮಾರು ಶ್ರೀಗಳನ್ನು ಪೇಜಾವರ ಶ್ರೀಗಳು ಸ್ವಾಗತಿಸಿ, ಪಲಿಮಾರು ಶ್ರೀಗಳಿಗೆ ಅಕ್ಷಯಪಾತ್ರೆ ಮತ್ತು ಸಟ್ಟುಗವನ್ನು ಹಸ್ತಾಂತರಿಸಿದರು.
ಪಟ್ಟದದೇವರಿಗೆ ಪೂಜೆ ಸಲ್ಲಿಸಿದ ನಂತರ 6.50ಕ್ಕೆ ಪಲಿಮಾರು ಶ್ರೀಗಳು ಸರ್ವಜ್ಞ ಪೀಠವನ್ನೇರಿದರು. 6.55 ಕ್ಕೆ ಬಡಗುಮಾಳಿಗೆಯ ಅರಳುಗದ್ದಿಗೆಯಲ್ಲಿ ಅಷ್ಠಮಠಾಧೀಶರ ಸಮ್ಮುಖದಲ್ಲಿ ವಿವಿಧ ಪರ್ಯಾಯ ವಿಧಿವಿಧಾನಗಳು ನಡೆಯುತು.