ಕುಂದಾಪುರ, ಡಿ 09 (Daijiworld News/MB) : ಉಡುಪಿ ಜಿಲ್ಲೆಯಲ್ಲಿ ಐತಿಹ್ಯಗಳಿರುವ ಸಾಕಷ್ಟು ಪ್ರದೇಶಗಳು ಇಂದಿಗೂ ಗತ ವೈಭವವನ್ನು ಸಾರುತ್ತಿದೆ. ಆದರೆ ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಮಾತ್ರ ಐತಿಹಾಸಿಕ ಪುರಾವೆಗಳಿರುವ ಸ್ಥಳಗಳ ರಕ್ಷಣೆಗೆ ಮನಸ್ಸು ಮಾಡದೆ ಇಚ್ಛಾಶಕ್ತಿಯನ್ನು ಮರೆತು ಬಿಟ್ಟಿದೆ. ಆದರೆ ಜಿಲ್ಲೆಯ ಉತ್ಸಾಹಿ ಯುವಕರ ತಂಡವೊಂದು ಸದ್ಯ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಹೊಸ ರೂಪ ನೀಡಲು ಮುಂದಾಗಿದೆ.
ಹೌದು ಜಿಲ್ಲೆಯ ಕುಂದಾಪುರ ತಾಲೂಕು ವ್ಯಾಪ್ತಿಯ ಬಸ್ರೂರು ಸಾಕಷ್ಟು ಐತಿಹ್ಯಗಳನ್ನು ಬಚ್ಚಿಟ್ಟುಕೊಂಡು ಮೌನವಾಗಿ ಕುಳಿತಿರುವ ಊರು. ಅಂತಹ ವಿಶೇಷ ಸ್ಥಳಗಳಲ್ಲಿ ಸದಾನಂದ ಸ್ವಾಮಿ ಮಠವು ಒಂದು. ಕಾಲನ ಹೊಡೆತಕ್ಕೆ ಸಿಲುಕಿದ ಸದಾನಂದ ಮಠದ ಒಳಗು ಹೊರಗು ಮರ ಗಿಡಗಳು ಬೆಳೆದು ಚಿಕ್ಕ ಕಾಡಾಗಿ ರೂಪುಗೊಂಡ ಬಳಿಕ, ಇಲ್ಲಿ ಒಂದು ಮಠವೊಂದು ಇತ್ತು ಎಂದು ಊರಿನವರೆ ಮರೆತುಬಿಡುವಷ್ಟು ಮಾಯಾವಾಗಿತ್ತು. ಆದರೆ ಸ್ಥಳೀಯ ಇತಿಹಾಸ ಸಂಶೋಧಕ ಟಿ.ಮುರುಗೇಶ್ ನೆರವಿನಿಂದ ಸದಾನಂದ ಮಠದ ಕುರಿತು ಮಾಹಿತಿ ಹೊರ ಬಿದ್ದ ಬಳಿಕ, ಒಂದಿಷ್ಟು ಜನ ಸ್ಥಳ ಪರಿಶೀಲಿಸಿದ , ಸದಾನಂದ ಸ್ವಾಮಿ ಮಠವಿತ್ತು ಎನ್ನುದಕ್ಕೆ ಸಾಕ್ಷಿಯಾಗಿ ಮಠದ ಹೊರ ಆವರಣ, ಮುಖ್ಯ ಮಂದಿರ, ಪಾಣಿ ಪೀಠ, ಹೆಬ್ಬಾಗಿಲು ಮತ್ತಿತರರ ಕುರುಹುಗಳು ಕಂಡಿವೆ.
ವಿಜಯನಗರ ಕಾಲದಲ್ಲಿ ಬಲು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಸ್ಥಾನದ ಪ್ರಾಮುಖ್ಯತೆ ಬಗ್ಗೆ ಇತಿಹಾಸ ತಜ್ಞ ಮರುಗೇಶ್ ನೀಡಿದ ಮಾಹಿತಿ ಪಡೆದ ಕುಂದಾಪುರದ ಯುವ ಬ್ರಿಗೇಡ್ ತಂಡದ ಉತ್ಸಾಹಿ ಯುವಕರು ಮತ್ತು ಸ್ಥಳೀಯ ಯುವ ಮನಸ್ಸುಗಳು ಒಂದಾಗಿ ಭಾನುವಾರ ಮುಂಜಾನೆಯಿಂದಲೇ ಐತಿಹಾಸಿಕ ಸ್ಮಾರಕದ ಯಾವುದೇ ವಸ್ತುಗಳು ಹಾಳಾಗದಂತೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದರು. ಸದಾನಂದ ಮಠದಿಂದ ಬೇರ್ಪಟ್ಟ ತುಂಡುಗಳನ್ನು ಇತಿಹಾಸ ತಜ್ಞರ ಮಾರ್ಗದರ್ಶನದಂತೆ ಒಗ್ಗೂಡಿಸಿ ಒಂದೆಡೆ ಸೇರಿಸಿ ಸ್ವಚ್ಛಗೊಳಿಸಲಾಯಿತು. ಈ ಕಾರ್ಯದಲ್ಲಿ ಬಸ್ರೂರು ಸ್ಥಳೀಯರ ಹಿರಿಯ ಮನಸ್ಸುಗಳು ಕೂಡ ಕೈ ಜೋಡಿಸಿದ್ದಾರೆ.