ಕುಂದಾಪುರ, ಡಿ 09(Daijiworld News/MSP): ಮನುಷ್ಯರಲ್ಲಿ ಮೂರು ವಿಧದ ಸುಖಗಳಿವೆ. ಒಂದು ತಾನು ಮಾತ್ರ ಸುಖವಾಗಿರುವುದು ಇನ್ನೊಂದು ತಾನು ಸುಖವಾಗಿರುವುದರ ಜೊತೆಗೆ ಇನ್ನೊಬ್ಬರ ಸುಖ ಬಯಸುವುದು ಮುರನೇಯದ್ದು ತನ್ನ ಸುಖವನ್ನೂ ಲೆಕ್ಕಿಸದೇ ಇನ್ನೊಬ್ಬರ ಸುಖ ಬಯಸುವುದು ಅಂದರೆ ತ್ಯಾಗದ ಸುಖ. ನಮ್ಮ ಮಕ್ಕಳಿಗೆ ಈ ಮೂರನೇ ಸುಖದ ದಾರಿಯನ್ನು ನಾವು ಪೋಷಕರು ತೊರಿಸಿಕೊಟ್ಟಿದ್ದೇ ಆದಲ್ಲಿ ಭಾರತದ ಭವಿಷ್ಯದ ಬಾಗಿಲು ತೆರೆಯುತ್ತದೆ ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಕುಂದಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಂಕರನಾರಾಯಣ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಯಮಿ ಅನಿಲ್ಕುಮಾರ್ ಶೆಟ್ಟಿ ಕೊಡಮಾಡಿದ ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
"ಭಾರತಕ್ಕೆ ಬೇಕಾಗಿರುವುದು ಆರ್ಥಿಕ ಶ್ರೀಮಂತರಲ್ಲ. ಶೈಕ್ಷಣಿಕ ಪದವಿ ಪಡೆದವರೂ ಅಲ್ಲ. ಈ ದೇಶಕ್ಕೆ ಬೇಕಾಗಿರುವುದು ಈ ಭಾರತ ನನ್ನದು ಎಂದು ಭಾವಿಸಿ ಅದಕ್ಕೋಸ್ಕರ ಜೀವ ಪಣಕ್ಕಿಟ್ಟು ಹೋರಾಡುವವರು. ಅಂತಹಾ ತರುಣರು ಈ ಶಾಲೆಯಿಂದ ಹೊರಗೆ ಬರುವಂತಾಗಬೇಕು. ಆಗ ಶಾಲೆಗಳ ಪ್ರಯತ್ನ ಸಾರ್ಥಕ " ಎಂದು ಚಕ್ರವರ್ತಿ ಸೂಲಿಬೆಲೆ ವ್ಯಾಖ್ಯಾನಿಸಿದರು.
ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದು ನಾನು ಈ ಎತ್ತರಕ್ಕೆ ಬೆಳೆಯಬೇಕಾದರೆ ನನಗೆ ನನ್ನು ಊರು ನನ್ನ ಶಾಲೆಯೇ ಕಾರಣ. ನನ್ನನ್ನು ನಾನು ಗುರುತಿಸಿಕೊಳ್ಳುವಾಗ ನಾನು ಎಲ್ಲಿಂದ ಬಂದೆ ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಹುಟ್ಟು ಸಾರ್ಥಕತೆ ಪಡೆಯುತ್ತದೆ ಎಂದರು. ಬಳಿಕ ತಾನು ಕಲಿತ ಶಾಲೆಯ ಗುರುಗಳಿಗೆ ಗುರುವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿ ಪಡೆದ ಶಿಕ್ಷಕಿ ಗೀತಾ ಪೈ ಇವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನನಿಲಾಯಿತು. ರೋಹಿತ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾ.ಪಂ.ಸದಸ್ಯ ಉಮೇಶ್ ಶೆಟ್ಟಿ, ಶಂಕರನಾರಾಯಣ ಗ್ರಾ.ಪಂ.ಸದಸ್ಯರುಗಳಾದ ವಸಂತಿ ಶೆಟ್ಟಿ, , ರತ್ನಾ ದೇವಾಡಿಗ, ಶ್ರೀ ವೀರಕಲ್ಲುಕುಟಿಕ ದೇವಸ್ಥಾನ ಶಂಕರನಾರಾಯಣ ಇದರ ಆಡಳಿತ ಮೊಕ್ತೇಸರರಾದ ಎಸ್. ಮಂಜುನಾಥ ಶೇಟ್, ಕ.ರಾಪ್ರಾ.ಶಾ.ಶಿ.ಸಂಘ ಕುಂದಾಪುರ ಇದರ ಅಧ್ಯಕ್ಷ ಮಲ್ಯಾಡಿ ಸದಾರಾಮ ಶೆಟ್ಟಿ, ಎಸ್.ಡಿ.ಎಂಸಿ. ಅಧ್ಯಕ್ಷ ಆನಂದ ಮೋಗವೀರ, ಅಧ್ಯಕ್ಷರು, ಶ್ರೀ ಶಂಕರನಾರಾಯಣ ಟ್ರಸ್ಟ್ (ರಿ)ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯ ಸಂತೋಷ್ ಕುಮಾರ್ ಶೆಟ್ಟಿ ವಿ. ಶಾಲೆಯ ವಾರ್ಷಿಕ ವರದಿ ವಾಚಿಸಿ ಸ್ವಾಗತಿಸಿದರು.