ಮಂಗಳೂರು, ಡಿ 09 (Daijiworld News/MB) : ನಗರದ ಹೊರವಲಯದ ಮೂಡುಶೆಡ್ಡೆ ಗ್ರಾಮ ಪಂಚಾತಯ್ ಕಟ್ಟಡದಲ್ಲಿ ಮಲಗಿದ್ದ ವ್ಯಕ್ತಿಗೆ ಮಂಜಾನೆ ಕತ್ತಿ ತೋರಿಸಿ ಬೆದರಿಕೆ ಹಾಕಿದ ಕಿರಾತಕರು ಅಲ್ಲಿದ್ದ ನಾಲ್ಕು ದನಗಳನ್ನು ಕಳವು ಮಾಡಿದ ಘಟನೆ ಭಾನುವಾರ ನಡೆದಿದೆ.
ಮೂಡುಶೆಡ್ಡೆ ನಿವಾಸಿ ಕೇಶವ ಜೋಗಿಯವರು ದನಗಳನ್ನು ಸಾಕುತ್ತಿದ್ದು ಹೈನುಗಾರಿಕೆಯೇ ಅವರ ಮನೆಯ ಆದಾಯವಾಗಿದೆ. ಅವರು ಒಟ್ಟು 8 ದನಗಳನ್ನು ಸಾಕುತ್ತಿದ್ದು ಆ ಪೈಕಿ ನಾಲ್ಕು ದನಗಳು ಮೇಯಲು ಹೋಗಿದ್ದು ಎರಡು ದಿನಗಳಿಂದ ಆ ದನಗಳು ಮರಳಿ ಹಟ್ಟಿಗೆ ಬಾರದೆ ಮೂಡುಶೆಡ್ಡೆ ಪಂಚಾಯತ್ ವ್ಯಾಪ್ತಿಯಲ್ಲೇ ತಿರುಗಾಡುತ್ತಿದ್ದವು.
ಸ್ಥಳೀಯ ನಿವಾಸಿಯೊಬ್ಬರು ಮೂಡುಶೆಡ್ಡೆ ಪಂಚಾಯತ್ ಬಳಿ ಪ್ರತಿ ದಿನ ಮಲಗುತ್ತಿದ್ದು ಬೆಳಿಗ್ಗೆ ಮೂರು ಗಂಟೆ ವೇಳೆಗೆ ಆಟೋವೊಂದು ಪಂಚಾಯತ್ ಬಳಿಗೆ ಬಂದು ಹೋಗಿತ್ತು. ಆ ನಂತರ ಬೆಳ್ಳಿಗ್ಗೆ ಸುಮಾರು 3:30 ಗಂಟೆಗೆ 2 ಕಾರುಗಳಲ್ಲಿ ಆಗಮಿಸಿದ 7 ಮಂದಿ ಪಂಚಾಯತ್ ಕಟ್ಟಡದಲ್ಲಿ ಮಲಗಿದ್ದ ವ್ಯಕ್ತಿಗೆ ಕತ್ತಿ ತೋರಿಸಿ, ಯಾವುದೇ ಪ್ರತಿಕ್ರಿಯೆ ನೀಡದಂತೆ ಬೆದರಿಕೆ ಹಾಕಿ ಅಲ್ಲಿದ್ದ ಎರಡು ದನಗಳು ಹಾಗೂ ಎರಡು ಕರುಗಳನ್ನು ಝೈಲೋ ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.
"ದುಷ್ಕರ್ಮಿಗಳು ದನ ಕಳವು ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಿಸಿ ಟಿವಿ ಕ್ಯಾಮೆರಾ ಫೋಟೇಜ್ನ್ನು ವಶಕ್ಕೆ ಪಡೆದಿದ್ದು ಆರೋಪಿಗಳ ಸುಳಿವು ಲಭ್ಯವಾಗುವ ಸಾಧ್ಯತೆ ಇದೆ" ಎಂದು ಪೋಲಿಸರು ತಿಳಿಸಿದ್ದಾರೆ.
4 ದನಗಳು ಕಳವಾದ ಕಾರಣ ಕೇಶವ ಜೋಗಿಯವರಿಗೆ ಸುಮಾರು 75,000 ಸಾವಿರ ನಷ್ಟ ಸಂಭವಿಸಿದೆ. 2 ವರ್ಷಗಳಲ್ಲಿ ಇವರ ಮನೆಯಿಂದ ಒಟ್ಟು 9 ದನಗಳು ಕಳವಾಗಿದೆ ಎಂದು ತಿಳಿದುಬಂದಿದೆ.
ದನ ಕರು ಕಳೆದುಕೊಂಡ ಕುಟುಂಬಕ್ಕೆ ಮಂಗಳೂರಿನಲ್ಲಿ ಜರಗಿದ ಗೋಮಂಡಲ ಕಾರ್ಯಕ್ರಮದಲ್ಲಿ ದನ, ಕರು ನೀಡಲಾಗಿದೆ. ಹಾಗೆಯೇ ಆರ್ಥಿಕ ಸಹಾಯ ಮಾಡಲಾಗಿದೆ.
ಸ್ಥಳಕ್ಕೆ ಕಾವೂರು ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.