ಉಡುಪಿ, ಜ 17: ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ನಾಳೆ ನಸುಕಿನಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿದ್ದು, ಉಡುಪಿ ಅದ್ದೂರಿಯಾಗಿ ರೆಡಿಯಾಗಿದೆ. ಪೇಜಾವರ ಮಠದ ವತಿಯಿಂದ ಬಡಗುಮಾಳಿಗೆಯನ್ನು ಖಾಲಿ ಮಾಡುವ ಪ್ರಕ್ರಿಯೆಗೆ ಆರಂಭವಾಗಿದ್ದರೆ,ಅಲ್ಲಿ ಮುಂದಿನ ೨ ವರ್ಷಗಳ ಕಾಲ ಆಡಳಿತವನ್ನು ಮುನ್ನಡೆಸಲು ಪಲಿಮಾರು ಮಠದವರು ತಯಾರಾಗುತ್ತಿದ್ದಾರೆ. ಇನ್ನು ಉಡುಪಿಯಲ್ಲಿ ಮುಂದಿನ ಶ್ರೀಗಳಿಗೆ ಶುಭಾಶಯ ಕೋರುವ ಫ್ಲೆಕ್ಸ್ ಗಳು ಬ್ಯಾನರ್ ಗಳು ರಾರಾಜಿಸುತ್ತಿವೆ. ಪರ್ಯಾಯೋತ್ಸವ ಮೆರವಣಿಗೆ ಆರಂಭವಾಗುವ ನಗರದ ಜೋಡುಕಟ್ಟೆಯಿಂದ ಕೆ.ಎಂ ಮಾರ್ಗದುದ್ದಕ್ಕೂ ದೀಪಾಲಂಕಾರ ಗಮನಸೆಳೆಯುತ್ತಿದೆ. ಸಾವಿರಾರು ಮಂದಿ ಭಾಗವಹಿಸುವುದರಿಂದ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಸಿಸಿಟಿವಿ ಕ್ಯಾಮರಗಳನ್ನು ಅಲ್ಲಲ್ಲಿ ಅಳವಡಿಸಲು ಈಗಾಗ್ಲೇ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇನ್ನು ಶ್ರೀಗಳ ದರ್ಬಾರ್ ಕಾರ್ಯಕ್ರಮದ ವೀಕ್ಷಣೆಗೆ ಉಡುಪಿಗೆ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ಪರ್ಯಾಯೋತ್ಸವಕ್ಕಾಗಿ ಸಂಚಾರ ಪಥವನ್ನು ಬದಲಾಯಿಸಲಾಗಿದೆ.