ಕಾನ್ಪುರ: ನಿರ್ಮಾಣ ಹಂತದಲ್ಲಿದ್ದ ಆ ಮನೆ ಬಹಳ ಸಮಯದಿಂದ ಬೀಗ ಹಾಕಿತ್ತು. ಸುತ್ತಮುತ್ತಲಿನವರಿಗೆ ಆ ಮನೆಯಲ್ಲಿ ಕುತೂಹಲ ಎಣಿಸುವಂತದ್ದು ಏನು ಇರಲಿಲ್ಲ. ಆದರೆ ಪೊಲೀಸ್ ದಾಳಿಯ ಬಳಿಕವೇ ತಿಳಿದಿದ್ದು ಆ ಮನೆಯಲ್ಲಿತ್ತು, ಕೋಟಿ ಕೋಟಿ ಹಣ ಎಂದು. ಹೌದು ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ರಾಷ್ಟ್ರೀಯ ತನಿಖಾ ದಳ ಹಾಗೂ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ನಿಷೇಧಿತ ನೋಟುಗಳನ್ನು ಆ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಇನ್ಸ್ಪೆಕ್ಟರ್ ಜನರಲ್ ಅಲೋಕ್ ಸಿಂಗ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಖಚಿತ ಮಾಹಿತಿ ಆಧಾರಿಸಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಪತ್ತೆಯಾದ ಪತ್ತೆಯಾಗಿರುವ ಹಣದ ಎಣಿಕೆ ಕಾರ್ಯ ಹಾಗೂ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಆದರೂ ದೊರೆತಿರುವ ಹಣದ ಮೌಲ್ಯ ಅಂದಾಜು 100 ಕೋಟಿ ರು. ಎಂದು ಶಂಕಿಸಲಾಗಿದ್ದು, ರಿಸರ್ವ್ ಬ್ಯಾಂಕ್ ಹಾಗೂ ಆದಾಯ ತೆರಿಗೆ ಇಲಾಖೆಯ ತಂಡ ಈ ಬಗ್ಗೆ ಖಚಿತ ಮಾಹಿತಿ ನೀಡಲಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಿದ್ದು, ಹಳೆಯ ನಿಷೇಧಿತ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಡಲೆಂದೇ ಈ ಹಣವನ್ನು ಶೇಖರಿಸಿಟ್ಟಿರಬಹುದೆಂದು ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.