ಮಂಗಳೂರು, ಡಿ 08 (Daijiworld News/MB) : ಮಂಗಳೂರು ಸೆಂಟ್ರಲ್ ಎಕ್ಸೈಸ್ ಆಂಡ್ ಸೆಂಟ್ರಲ್ ಟ್ಯಾಕ್ಸ್ ಕಮಿಷನರೇಟ್ ವತಿಯಿಂದ ನೂತನ ಜಿಎಸ್ಟಿ ರಿಟರ್ನ್ಸ್ ಬಗ್ಗೆ ಫೀಡ್ಬ್ಯಾಕ್ ದಿವಸ್ ಅನ್ನು ಆಚರಿಸಲಾಯಿತು.
ಇಲ್ಲಿನ ಅತ್ತಾವರದಲ್ಲಿರುವ ಆದಾಯ ತೆರಿಗೆ ಭವನದಲ್ಲಿ ಕಾರ್ಯಕ್ರಮ ನಡೆದಿದ್ದು ಈ ವೇಳೆ ಮಾತಾನಾಡಿದ ಮಂಗಳೂರು ಸೆಂಟ್ರಲ್ ಎಕ್ಸೈಸ್ ಆಂಡ್ ಸೆಂಟ್ರಲ್ ಟ್ಯಾಕ್ಸ್ ಕಮಿಷನರೇಟ್ನ ಕಮಿಷನರ್ ಇಮಾಮುದ್ದೀನ್ ಅಹಮದ್ ಅವರು ನೂತನ ತೆರಿಗೆ ರಿಟರ್ನ್ಸ್ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮತ್ತು ನೂತನ ತೆರಿಗೆ ಬಗ್ಗೆ ತೆರಿಗೆದಾರರ ಅಭಿಪ್ರಾಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಫೀಡ್ಬ್ಯಾಕ್ ದಿವಸ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
೨೦೨೦ರ ಎಪ್ರಿಲ್ ೧ರಿಂದ ಜಾರಿಯಾಗಲಿರುವ ನೂತನ ರಿಟರ್ನ್ಸ್ ಬಗ್ಗೆ ತೆರಿಗೆದಾರರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮತ್ತು ಇರುವಂತಹ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಅಧಿಕ ತೆರಿಗೆ ಪಾವತಿದಾರರು ಪಾಲ್ಗೊಂಡಿದ್ದರು.
ಮಂಗಳೂರು ಸೆಂಟ್ರಲ್ ಎಕ್ಸೈಸ್ ಆಂಡ್ ಸೆಂಟ್ರಲ್ ಟ್ಯಾಕ್ಸ್ ಕಮಿಷನರೇಟ್ನ ಕಮಿಷನರ್ ಇಮಾಮುದ್ದೀನ್ ಅಹಮದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ನ್ಯೂ ರಿಟರ್ನ್ಸ್ ಫೈಲಿಂಗ್ ಮತ್ತು ಅಪ್ಲೋಡಿಂಗ್ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.