ಮಂಗಳೂರು, ಡಿ 07 (DaijiworldNews/SM): ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಸರಕಾರ ಕುತಂತ್ರ ನಡೆಸುತ್ತಿದೆ ಎಂಬ ವಿಚಾರವು ಸತ್ಯಕ್ಕೆ ದೂರವಾದದ್ದು ಎಂದು ಇಬ್ರಾಹೀಂ ಗೂನಡ್ಕ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನಾಗಿ ನನ್ನನ್ನು ನೇಮಕ ಮಾಡಿದೆ. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಉಳ್ಳಾಲ ದರ್ಗಾ ಸಮಿತಿಯವರು ಮನವಿ ಸಲ್ಲಿಸಿದ್ದರು. ರಾಜ್ಯದ ಹೈಕೋರ್ಟ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆಡಳಿತ ಅಧಿಕಾರಿ ನೇಮಕಾತಿ ಬಗ್ಗೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ವಿಷಾದನೀಯ ಎಂದರು.
ಪ್ರಸ್ತುತ ಉಳ್ಳಾಲ ಸಯ್ಯದ್ ಮದನಿ ದರ್ಗಾ ರಾಜ್ಯ ವಕ್ಫ್ ಮಂಡಳಿಯ ಆಧೀನದಲ್ಲಿದ್ದು, ಈ ಸಂಸ್ಥೆಯ ದೈನಂದಿನ ಆಡಳಿತಕ್ಕೆ ಸಂಬಂಧಿಸಿದ ವಿಷಯ, ನೂತನ ಆಡಳಿತ ಮಂಡಳಿಯ ರಚನೆಯ ಸಿದ್ಧತೆ ಮತ್ತು ಪ್ರತೀ 5 ವರ್ಷಕ್ಕೆ ಒಮ್ಮೆ ನಡೆಯುವ ಉರೂಸ್ ಗೆ ಪೂರ್ವ ತಯಾರಿ ಮಾಡುವಂತೆ ನನ್ನನ್ನು ಸರ್ಕಾರ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ ಎಂದು ತಿಳಿಸಿದರು.
ವಕ್ಫ್ ಮಂಡಳಿಗೆ ಒಳಪಟ್ಟ ಮಸೀದಿ ಅಥವಾ ದರ್ಗಾಗಳಲ್ಲಿ ಗೊಂದಲಗಳು ನಿರ್ಮಾಣವಾದಾಗ ಆಡಳಿತಾಧಿಕಾರಿ ನೇಮಕ ಮಾಡುವುದು ಸಾಮಾನ್ಯ. ಈ ಮಧ್ಯೆ ಕೆಲವರು ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಸರಕಾರ ಕುತಂತ್ರ ನಡೆಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದ್ದಾರೆ.