ಕಾಸರಗೋಡು, ಡಿ 7(Daijiworld News/MSP): ಕೇರಳ ರಾಜ್ಯದ ಅತೀ ಎತ್ತರದ ಸೇತುವೆಯೊಂದು ಡಿ.೮ ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ. ಪೆರ್ಲಡ್ಕ-ಆಯಂಕಡವು-ಪೆರಿಯ ರಸ್ತೆಯಲ್ಲಿ ತೇಜಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆಯಂಕಡವು ಸೇತುವೆ ಉದ್ಘಾಟನೆಗೆ ಸಜ್ಜಾಗಿದೆ.
ಈ ಸೇತುವೆ 24 ಮೀಟರ್ ಎತ್ತರ, 150 ಮೀಟರ್ ಉದ್ದದಲ್ಲಿರುವ ಸೇತುವೆಯಲ್ಲಿ 3.800 ಕಿಮೀ ಮೆಕ್ ಡ್ಯಾಂ ನಡೆಸಿದ ಸಂಪರ್ಕ ರಸ್ತೆ ಈಗಾಗಲೇ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿ ನಿಂತಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 14 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗುವ ನಿರೀಕ್ಷೆಯಿದೆ. ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ ಪ್ರದೇಶಗಳಿಂದ ಬೇಕಲಕ್ಕೆ ಬಹು ಸುಲಭದಲ್ಲಿ ಆಗಮಿಸುವುದಕ್ಕೆ ಈ ಸೇತುವೆ ಪೂರಕವಾಗಿದೆ. ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು, ಬೆಳ್ಳೂರು ಗ್ರಾಮಪಂಚಾಯತ್ ನಿವಾಸಿಗಳಿಗೆ ಪೆರಿಯ ಕೇಂದ್ರೀಯ ವಿವಿಗೆ, ಕಾಞಂಗಾಡ್ ನಗರಕ್ಕೆ ತಲಪಲು ಸುಲಭ ಸಾಧ್ಯ. ಎತ್ತರವಾಗಿರುವ ಸೇತುವೆ ಪ್ರಕೃತಿ ರಮಣೀಯ ಆವರಣದಲ್ಲಿರುವುದು ಜನತೆಯ ಆಕರ್ಷಣೆಗೆ ಕಾರಣವಾಗಲಿದೆ. ಸೇತುವೆಯ ಕೆಳಬಾಗವನ್ನು ಸದುಪಯೋಗಪಡಿಸಿ, ಮುಕ್ತ ಸಭಾಂಗಣ, ಫುಡ್ ಕೋರ್ಟ್, ಶೌಚಾಲಯ ಬ್ಲಾಕ್ ಇತ್ಯಾದಿಗಳನ್ನು ಮೊದಲ ಹಂತದಲ್ಲೂ, ನದಿಯ ಸೌಂದರ್ಯ ವೀಕ್ಷಣೆಗೆ ಗ್ಲಾಸ್ ಬ್ರಿಜ್ ಯೋಜನೆಯನ್ನು ದ್ವಿತೀಯ ಹಂತದಲ್ಲೂ ನಿರ್ಮಿಸುವ ವಿಚಾರ ಪ್ರವಾಸೋದ್ಯಮ ಇಲಾಖೆಯ ಪರಿಶೀಲನೆಯಲ್ಲಿದೆ. ಎನ್.ಎಚ್.66 ಪೆರಿಯಕ್ಕೆ ತಲಪಲು 2500 ಕಿಮೀ ರಸ್ತೆಯ ಅಭಿವೃದ್ಧಿಗೆ ನಿಧಿಯನ್ನು ಕಾಸರಗೋಡು ಅಭಿವೃದ್ದಿ ಪ್ಯಾಕೇಜ್ ಯೋಜನೆಯಲ್ಲಿ ಅಳವಡಿಸಲಾಗಿದೆ.
ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇತುವೆ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಲಿದ್ದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕರಾದ ಎಂ.ರಾಗೋಪಾಲನ್, ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಸಿ.ಕಮರುದ್ದೀನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಉಪಸ್ಥಿತರಿರುವರು.