ಉಡುಪಿ, ಡಿ 6 (Daijiworld News/MSP): ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಡಿಸೆಂಬರ್ 10 ರಂದು ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಮಧುರೈನ ವಾಸುದೇವನ್ ಅವರು ಡಿಸೆಂಬರ್ 10 ರಂದು ಉಡುಪಿಗೆ ಆಗಮಿಸಿ ತರಬೇತಿಯನ್ನು ನೀಡಲಿದ್ದು, ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ಕೈಗೊಳ್ಳುವ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಎಲ್ಲಾ ಜನ ಪ್ರತಿನಿಧಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಿಸುವ ಮೂಲಕ ಜಿಲ್ಲೆಯ ಪ್ಲಾಸ್ಟಿಕ್ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಜನವರಿ 1 ರಿಂದ ಒಣ ತ್ಯಾಜ್ಯ ಸಂಗ್ರಹ ಮಾಡುವ ಕುರಿತಂತೆ ಸೂಚನ ನೀಡಲಾಗಿದೆ, ಒಣ ಕಸದ ಸಮರ್ಪಕ ವಿಲೇವಾರಿ ಕುರಿತಂತೆ ಎಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓಗಳಿಗೆ ತರಬೇತಿಯನ್ನೂ ಸಹ ನೀಡಲಾಗುತ್ತಿದೆ, ಒಣ ಕಸ ಸಂಗ್ರಹಣೆಗೆ ಕಟ್ಟಡಗಳನ್ನು ಗುರುತಿಸುವಂತೆ ಎಲ್ಲಾ ಪಂಚಾಯತ್ಗಳಿಗೆ ಸೂಚಿಸಲಾಗಿದೆ ಎಂದು ದಿನಕರ ಬಾಬು ಹೇಳಿದರು.
ಅಂಬಲಪಾಡಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ, ಅಂಬಲಪಾಡಿ ಮತ್ತು ಕಡೆಕಾರು ವ್ಯಾಪ್ತಿಯ ಸುಮಾರು 400 ಮನೆಗಳ 150 ಕ್ಕೂ ಹೆಚ್ಚು ಬಾವಿಯ ನೀರು ಕಲುಷಿತೊಂಡಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ದಿ ಕೋಶದ ಅಧಿಕಾರಿಗಳಿಗೆ ದಿನಕರ ಬಾಬು ಸೂಚಿಸಿದರು.
ಶಾಲಾ ಸಂಪರ್ಕ ಸೇತುವೆ ಯೋಜನೆಯಡಿ 119 ಸೇತುವೆಗಳ ಕಾಮಗಾರಿಗಳು ಮುಕ್ತಾಯವಾಗಿದ್ದು, 117 ಪ್ರಗತಿಯಲ್ಲಿದೆ, 97 ಸೇತುವೆಗಳಿಗೆ ಟೆಂಡರ್ ಕರೆಯಲಾಗಿದ್ದು, 83 ಮಂಜೂರಾತಿ ಹಂತದಲ್ಲಿವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು, ಈ ಕುರಿತು ಪ್ರತಿಕ್ರಿಯಿಸಿದ ಅಧ್ಯಕ್ಷರು, ಶಾಲಾ ಕಟ್ಟಡಗಳಲ್ಲಿ ಬಾಕಿ ಇರುವ ಶೌಚಾಲಯ ಕಾರ್ಯವನ್ನು ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ವಸತಿ ನಿಗಮ ಮೂಲಕ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ, ಹಣ ಬಿಡುಗಡೆ ಕುಂಠಿತಗೊಂಡಿರುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.