ಕುಂದಾಪುರ, ಡಿ 06 (Daijiworld News/MSP): ಮಲ್ಲಿಗೆ ಕೃಷಿ ಇತ್ತೀಚೆಗಿನ ವರ್ಷಗಳಲ್ಲಿ ಬಹಳ ಬೇಡಿಕೆ ಪಡೆದುಕೊಳ್ಳುತ್ತಿದೆ. ರೈತರಿಗೆ ಈ ಬಗ್ಗೆ ಮಾಹಿತಿ ನೀಡುವ, ಕೃಷಿಗೆ ಉತ್ತೇಜಿಸುವ ಕೆಲಸಗಳು ಈಗ ಆಗುತ್ತಿವೆ. ಆದರೆ ೩೦ ವರ್ಷಗಳ ಹಿಂದೆ ಮಲ್ಲಿಗೆ ಕೃಷಿ ಮಾಡುವುದೆಂದರೆ ಒಂದು ರೀತಿ ಸವಾಲು. ಗಿಡ ಎಲ್ಲಿ ಸಿಗುತ್ತದೆ, ಮಾರುಕಟ್ಟೆ ಹೇಗೆ ಎನ್ನುವ ಮಾಹಿತಿ ಕೃಷಿಕರಿಗೆ ದುರ್ಲಭವಾಗಿದ್ದ ದಿನಗಳವು. ಆದರೆ ಕುಂದಾಪುರ ತಾಲೂಕಿನ ಕಂದಾವರದ ಕೃಷಿಕ ವಾಸುದೇವ ಶೇರಿಗಾರ್ ಅವರು ಕಂದಾವರ ಭಾಗದಲ್ಲಿ ಮಲ್ಲಿಗೆ ಕೃಷಿ ಮಾಡುವ ಕನಸು ಕಂಡಿದ್ದರು. ಭತ್ತ ಬೇಸಾಯಗಾರರಾಗಿದ್ದ ಅವರು ಪುಷ್ಪ ಕೃಷಿಯತ್ತ ಮನಸು ಮಾಡಿದ್ದರು. ಪ್ರಸಿದ್ಧಿ ಪಡೆದ ಶಂಕರಪುರ ಮಲ್ಲಿಗೆಯ ನಾಟಿಗೆ ಯೋಚನೆ ಮಾಡಿದ್ದರು.
29 ವರ್ಷಗಳ ಹಿಂದೆಯೇ ದೊಡ್ಡ ಮಟ್ಟದಲ್ಲಿಯೇ ಇವರು ಮಲ್ಲಿಗೆ ಕೃಷಿಗೆ ನಾಂದಿ ಹಾಡಿದ್ದರು. 300 ಶಂಕರಪುರ ತಳಿ ಎನ್ನಲಾದ ಮಲ್ಲಿಗೆ ಗಿಡಗಳನ್ನು ತಂದು, ಮನೆಯ ಹತ್ತಿರ ಸರಿಯಾಗಿ ಬಿಸಿಲು ಬೀಳುವ ಪ್ರದೇಶದಲ್ಲಿ ನಾಟಿ ಮಾಡಿದರು. ಆಸಕ್ತಿಯಿಂದ ಗಿಡಗಳ ಆರೈಕೆ ಮಾಡಿದರು. ಮರುವರ್ಷದಿಂದ ಹೂವು ಕೊಯ್ಲಿಗೆ ಬರಲಾರಂಭಿಸಿತು. ಆಗ ಅವರು ಮಾರುಕಟ್ಟೆಯ ಬಗ್ಗೆ ತಲೇನೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ 30 ವರ್ಷಗಳ ಹಿಂದೆ ಮಲ್ಲಿಗೆ ಗಿಡಗಳನ್ನು ದೊಡ್ಡ ಮಟ್ಟದಲ್ಲಿ ನೆಡುತ್ತಾರೆ ಎಂದು ಅದೊಂದು ಗ್ರಾಮದ ಮನೆಮನೆಯ ಸುದ್ಧಿಯಾಗುತ್ತಿತ್ತು. ಹಾಗಾಗಿ ವಾಸುದೇವ ಶೇರಿಗಾರರು ಮಲ್ಲಿಗೆ ನೆಟ್ಟಿದ್ದಾರೆ ಎನ್ನುವ ಮಾತೆ ಮಾರುಕಟ್ಟೆಯಾಗಿ ಪರಿಣಮಿಸಿತು. ಹಾಗಾಗಿ ಗ್ರಾಹಕರು ಮನೆಯ ಬಳಿಗೆ ಹುಡುಕಿಕೊಂಡು ಬರಲಾರಂಭಿಸಿದರು.
ಶೇರಿಗಾರರು ಮಲ್ಲಿಗೆಯಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂದ ನಂತರ. ಶ್ರೀ ಜನಾರ್ದನ ಪ್ರಗತಿಬಂಧು ಸ್ವಸಹಾಯ ಸಂಘವನ್ನು ರಚಿಸಿಕೊಂಡ ಬಳಿಕ ಶ್ರಮವಿನಿಮಯವನ್ನು ತಮ್ಮ ಕೃಷಿತಾಕುವಿನಲ್ಲಿಯೇ ಆರಂಭಿಸಿದರು. ಮೊದಲ ಆಧ್ಯತೆಯೇ ಮಲ್ಲಿಗೆ ಕೃಷಿಯ ಪುನಶ್ಚೇತನ ಆಗಿತ್ತು. ಯೋಜನೆಯ ಅಧಿಕಾರಿಗಳು, ಸೇವಾನಿರತರಿಂದ ಮಾಹಿತಿ ಮಾರ್ಗದರ್ಶನ ಪಡೆದುಕೊಂಡು ಶುದ್ಧ ಶಂಕರಪುರ ಮಲ್ಲಿಗೆ ತಳಿಯನ್ನು ತಂದು ನಾಟಿ ಮಾಡಿದರು.
ರಾಸಾಯನಿಕ ಪದಾರ್ಥಗಳನ್ನು ಬಳಸದೇ ಸಂಪೂರ್ಣ ಸಾವಯವ ವಿಧಾನ ಅನುಸರಿಸಿದರು. ಸಸ್ಯ ಸಂರಕ್ಷಣೆಗೂ ಕೂಡಾ ಸಾವಯವ ವಿಧಾನವನ್ನೇ ಬಳಸಿದರು. ನೆಲಗಡಲೆ ಹಿಂಡಿ, ಗಂಜಲ ಎರಡು ದಿನ ಕೊಳೆಸಿ ಗಿಡಗಳಿಗೆ ನೀಡುವ ಕ್ರಮ ಅನುಸರಿಸಿದರು. ಒಂದು ವರ್ಷದಲ್ಲಿಯೇ ಗಿಡಗಳು ಹುಲುಸಾಗಿ ಬೆಳೆದವು. ಗುಣಮಟ್ಟದ, ಪರಿಮಳಯುಕ್ತ, ಆಕರ್ಷಕ ಹೂವು ಬಿಡಲಾರಂಬಿಸಿದವು. ಮೊದಲಿಗಿಂತ ದುಪ್ಪಟ್ಟು ಹೂವು ಇದರಿಂದ ಬರಲಾರಂಬಿಸಿತು. ಕೆಲವು ತಾಂತ್ರಿಕ ಮಾಹಿತಿಗಳು ಕೂಡಾ ಲಭಿಸಿತು. ಇನ್ನಷ್ಟು ಲಾಭದಾಯಕವಾಗಿ ಮಲ್ಲಿಕೆ ಕೃಷಿಯಲ್ಲಿ ಸುಧಾರಣೆಗಳನ್ನು ಕಂಡುಕೊಂಡರು.
ಪ್ರಸ್ತುತ ಇವರ ಬಳಿ 120೦ ಮಲ್ಲಿಗೆ ಗಿಡಗಳಿವೆ. ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡಿರುವ ಇವರು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಮನೆಯಲ್ಲಿಯೇ ನೇಯ್ದು ಮನೆಯಲ್ಲಿಯೇ ಮಾರಾಟ ಮಾಡುತ್ತಾರೆ. ಇವರ ಮಲ್ಲಿಗೆಗೆ ಭಾರೀ ಬೇಡಿಕೆ ಇದೆ. ಮೊದಲೇ ಹೂವನ್ನು ಕಾಯ್ದಿರಿಸುತ್ತಾರೆ. ಮನೆಗೇ ಬಂದು ಖರೀದಿಸುತ್ತಾರೆ. ಸೀಸನ್ನಲ್ಲಿ 30ರಿಂದ 50ಸಾವಿರದ ತನಕ ಹೂವು ಆಗುತ್ತದೆ.
ಇವರು ಮಲ್ಲಿಗೆ ಗಿಡಗಳ ತಯಾರಿಯನ್ನು ಮಾಡಿದ್ದಾರೆ. ಬೇರೆ ಬೇರೆ ಕಡೆಗಳಿಂದ ಕೃಷಿಕರು ಇವರು ತಯಾರಿಸಿದ ಗಿಡಗಳನ್ನು ಖರೀದಿಸಿದ್ದಾರೆ. ಕೃಷಿಕರು ಮಲ್ಲಿಗೆ ತಳಿ ವಿಚಾರದಲ್ಲಿ ಮೋಸ ಹೋಗಬಾರದು ಎನ್ನುವ ನೆಲೆಯಲ್ಲಿ ನರ್ಸರಿ ಆರಂಭಿಸಿದ್ದೇನೆ. ಶಂಕರಪುರ ಮಲ್ಲಿಗೆಯ ಉತ್ಕೃಷ್ಟ ಕಡ್ಡಿಗಳಿಂದಲೇ ಸಸ್ಯಾಭಿವೃದ್ದಿ ಮಾಡಿ ಆಸಕ್ತರಿಗೆ ನೀಡುತ್ತಿದ್ದೇನೆ ಎನ್ನುತ್ತಾರೆ. ಇವರ ಮಲ್ಲಿಗೆ ಕೃಷಿ ಅಧ್ಯಯನಕ್ಕೆ ಹಲವೆಡೆಯಿಂದ ಅಧ್ಯಯನ ಪ್ರವಾಸಿಗರು ಬಂದಿದ್ದಾರೆ. ತಾಲೂಕಿನ ಹಿರಿಯ ಮಲ್ಲಿಗೆ ಕೃಷಿಕರಾಗಿ ಇವರು ಗಮನ ಸಳೆಯುತ್ತಾರೆ.
ಮಾಹಿತಿಗೆ ದೂರವಾಣಿ ಸಂಖ್ಯೆ-9620582636