ಮೂಡುಬಿದಿರೆ, ಡಿ 05 (DaijiworldNews/SM): ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ಸೊಂದು ರಸ್ತೆ ಬದಿಗೆ ಉರುಳಿಬಿದ್ದ ಘಟನೆ ಮೂಡುಬಿದಿರೆಯ ಅಲಂಗಾರಿನಲ್ಲಿ ನಡೆದಿದೆ.
ಘಟನೆಯಲ್ಲಿ 18 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರಿನಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಬಸ್ಸು ಆಲಂಗಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ಸಂದರ್ಭ ಮೂಡುಬಿದಿರೆ ಗಾಂಧಿನಗರದ ಸುಮಾ ಎಂಬವರಿಗೆ ತೀವ್ರ ತರಹದ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ಗಾಯಗೊಂಡಿರುವ ಪ್ರಯಾಣಿಕರನ್ನು ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎನ್ನಲಾಗಿದ್ದು, ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.