ನವದೆಹಲಿ : ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರಿಕರಿಗೆ ಪ್ರಸ್ತುತ ವರ್ಷದಿಂದ ಸಬ್ಸಿಡಿಯನ್ನು ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಈ ಹಿಂದೆ ಹಜ್ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದ್ದ ಹಜ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಜ 16 ರ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಸುಮಾರು 1.75 ಲಕ್ಷ ಹಜ್ ಯಾತ್ರಿಕರ ಸಬ್ಸಿಡಿ ರದ್ದು ಮಾಡುವುದಾಗಿ ತಿಳಿಸಿರುವ ಅವರು , ಹಜ್ ಸಬ್ಸಿಡಿ ಹಣವನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಬಳಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 2012 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಮೇರೆಗೆ ಕೇಂದ್ರ ಸರ್ಕಾರ ದೊಸ ಕರಡು ನೀತಿಯನ್ನು ತಯಾರಿಸಿತ್ತು.
ಕೇಂದ್ರ ಸರ್ಕಾರ ಪ್ರತಿವರ್ಷ ಹಜ್ ಯಾತ್ರೆ ಸಬ್ಸಿಡಿಗೆ ಸುಮಾರು 750 ಕೋಟಿ ರುಪಾಯಿ ವೆಚ್ಚ ಮಾಡುತ್ತಿತ್ತು. ಈ ಸಬ್ಸಿಡಿಯ ಉಪಯೋಗ ಮುಸ್ಲಿಂರಿಗೆ ಆಗುತ್ತಿರಲಿಲ್ಲ. ಬದಲಾಗಿ ಏಜೆನ್ಸಿಗಳಿಗೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ನಿಲ್ಲಿಸಲಾಗಿದೆ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.