ಮಂಗಳೂರು, ಡಿ 05 (Daijiworld News/MB): ಸುರತ್ಕಲ್ ಬಾರ್ ಒಂದರ ಬಳಿ ನಡೆದ ಸಂದೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಂಡಿದ್ದು ಮತ್ತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಶರತ್ ಯಾನೆ ಮುನ್ನಾ(35), ಮನೋಜ್ ಯಾನೆ ಮನು (40), ದೀಪಕ್ ರಾಜ್ (33), ಪ್ರವೀಣ್ ಕುಂದರ್ (42) ಹಾಗೂ ಮಿಥುನ್ (40) ಎಂದು ಗುರುತಿಸಲಾಗಿದೆ.
ಈ ಮೊದಲು ಈ ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ನವೆಂಬರ್ ೨೯ರಂದು ಸುರತ್ಕಲ್ ನ ಬಾರ್ ಒಂದರಲ್ಲಿ ಗುಡ್ಡೆಕೊಪ್ಲದ ಸಂದೇಶ್ (30) ಎಂಬವರ ಹತ್ಯೆ ಮಾಡಲಾಗಿತ್ತು. ಸಂದೇಶ್ ಮೀನುಗಾರ ವೃತ್ತಿಯನ್ನು ಮಾಡುತ್ತಿದ್ದು ನವೆಂಬರ್ ೨೮ರಂದು ಶಬರಿಮಲೆಯಿಂದ ವಾಪಾಸ್ ಬಂದಿದ್ದರು.
ಮರುದಿನ ಸಂದೇಶ್ ಸ್ನೇಹಿತರನ್ನು ಭೇಟಿಯಾಗುವ ನಿಟ್ಟಿನಲ್ಲಿ ಬಾರ್ ಮುಂಭಾಗಕ್ಕೆ ತೆರಳಿದ್ದು ನವರಾತ್ರಿ ಹುಲಿವೇಷ ಹಾಕುವ ವಿಚಾರದಲ್ಲಿ ಮಾತು ಬೆಳೆದಿದೆ. ಈ ಮೊದಲು ಈ ವಿಚಾರದಲ್ಲಿ ಮಾತುಕತೆ ನಡೆದು ಗೆಳೆಯರ ನಡುವೆ ಮನಸ್ತಾಪ ಉಂಟಾಗಿತ್ತು. ಈ ವಿಷಯದಲ್ಲಿ ಮಾತುಕತೆ ಬೆಳೆದಾಗ ಕುಪಿತರಾದ ಗೆಳೆಯರು ಮದ್ಯಪಾನ ಮಾಡಿದ ಮತ್ತಿನಲ್ಲಿದ್ದು ಬಾರ್ ನ ಬಾಗಿಲಿನ ಒಳ ಚಿಲಕ ಹಾಕಿ ಮಾರಕ ಆಯುಧಗಳಿಂದ ಸಂದೇಶ್ ಅವರನ್ನು ಹತ್ಯೆ ಮಾಡಿದ್ದಾರೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.