ಮಂಗಳೂರು, ಡಿ 05 (Daijiworld News/MB): ಕಾಸರಗೋಡು ಮೂಲದ ಸುದರ್ಶನ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ನ್ಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆಯ ಪ್ರಮುಖ ಆರೋಪಿಯಾದ ರಕ್ಷಿತ್ ಮೂಲತಃ ಮಂಜೇಶ್ವರದವನಾಗಿದ್ದು ಪ್ರಸ್ತುತ ಉಳ್ಳಾಲ ಕಾಪಿಕಾಡ್ನಲ್ಲಿ ವಾಸವಾಗಿದ್ದಾನೆ. ಹಾಗೆಯೇ ಪ್ರಕರಣದ ಆರೋಪಿಗಳಾದ ಬೆನ್ನಿ ತೊಕ್ಕೊಟ್ಟು ಒಳಪೇಟೆ ನಿವಾಸಿ, ರಾಕೇಶ್ ಕುಂಬಳೆ ನಿವಾಸಿ ಹಾಗೂ ಪುತ್ತೂರು ನಿವಾಸಿ ಶ್ರೀಜಿತ್ ಬಂಧಿತರು.
ಆರೋಪಿ ರಕ್ಷಿತ್, ಸುದರ್ಶನ್ ತನ್ನ ಪ್ರೇಯಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸುದರ್ಶನ್ ಆಕೆಯ ವೀಡಿಯೋ ಚಿತ್ರೀಕರಣ ನಡೆಸಿದ ಕಾರಣದಿಂದಾಗಿ ಹತ್ಯೆ ಮಾಡಿದ್ದಾನೆ ಎಂದು ಈಗಾಗಲೇ ತಪ್ಪೊಪ್ಪಿಕೊಂಡಿದ್ದಾನೆ.
ರೌಡಿ ರಕ್ಷಿತ್ ಸುದರ್ಶನ್ ಮೃತದೇಹವನ್ನು ರೈಲ್ವೆ ಹಳಿ ಎಸೆದು ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಹತ್ಯೆ ನಡೆಸಿರುವ ಬಗ್ಗೆ ತಿಳಿಸಿದ್ದು " ನಾನು ಓರ್ವನನ್ನು ಕೊಂದು ಹಳಿ ಮೇಲೆ ಬಿಸಾಕಿದ್ದೇನೆ. ಈಗ ನಿಮ್ಮ ಕೈಗೆ ಸಿಕ್ಕಿದರೆ ನೀವು ಎನ್ ಕೌಂಟರ್ ಮಾಡಬಹುದು. ನಾಳೆ ಬಂದು ಶರಣಾಗುತ್ತೇನೆ" ಎಂದು ಹೇಳಿದ್ದ.
ಆರೋಪಿ ಭಾನುವಾರ ಸಂಜೆ ಎಸಿಪಿ ವಿಶೇಷ ಪೊಲೀಸ್ ತಂಡಕ್ಕೆ ಶರಣಾಗಿದ್ದು ಈಗಾಗಲೇ ಆರೋಪಿ ಎರಡು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದುಬಂದಿದೆ.
ಯುವತಿಯ ವಿಡಿಯೋ ವೈರಲ್ ಮಾಡಿದ ಸುದರ್ಶನ್ ಮೇಲೆ ಕುಪಿತನಾಗಿದ್ದ ಆರೋಪಿ ಕೇರಳ ಮೂಲದ ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದು ಒಂದು ಗ್ರೂಪ್ನಲ್ಲಿ ವಿಡಿಯೋ ಹಾಕಿದ ಮಾಹಿತಿ ಗ್ರೂಪ್ ಸದಸ್ಯನಿಂದ ತಿಳಿದು ಬಂದಿದೆ. ಹಾಗಾಗಿ ಹತ್ಯೆ ಮಾಡುವ ಉದ್ದೇಶದಿಂದಲ್ಲೇ ಬೆಂಗಳೂರಿನಿಂದ ಮಂಗಳೂರಿಗೆ ಬಂದ ರಕ್ಷಿತ್ ಆ ಮೊದಲೇ ಸುದರ್ಶನ್ನನ್ನು ಸಂಪರ್ಕಿಸಿ" ನಾವು ಬಿಜೆಪಿ ಕಾರ್ಯಕರ್ತರು ನಮಗೆ ಹುಡುಗಿಯ ಮಾಹಿತಿ ಇದೆ. ನೀನು ತೊಕ್ಕೊಟ್ಟಿಗೆ ಬಾ. ನಾವು ಕುಳಿತು ಈ ಕುರಿತು ಮಾತಾನಾಡೋಣ ಎಂದು ತಿಳಿಸಿದ್ದು ಆ ನಂತರ ಬೈಕ್ನಲ್ಲಿ ಬಂದ ಸುದರ್ಶನ್ನನ್ನು ತಲಪಾಡಿಯಿಂದ ಕಾರಿನಲ್ಲಿ ಕರೆದುಕೋಮಡು ಹೋದ ಆರೋಪಿಗಳು ಮಡ್ಯಾರ್ನ ರೂಮ್ ಒಂದರಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಈ ಕೃತ್ಯವೆಸಗಲು ಬಳಸಿದ ಕಾರಿಗಾಗಿ ಶೋಧ ನಡೆಸಲಾಗುತ್ತಿದೆ.