ಮೈಸೂರು 16: ಯದುವಂಶದ ಯುವರಾಜನ ನಾಮಕರಣದ ದಿನಾಂಕ ಫಿಕ್ಸ್ ಆಗಿದ್ದು, ಫೆ.19ರಂದು ಪುಟ್ಟ ಯುವರಾಜನ ನಾಮಕರಣ ನಡೆಯಲಿದೆ. ಮೈಸೂರು ಅರಸು ಮನೆತನದ ಯದುವೀರ್-ತ್ರಿಷಿಕಾ ದಂಪತಿಗೆ ಜನಿಸಿರುವ ಗಂಡು ಮಗುವಿಗೆ ನಾಮಕರಣ ಮಾಡಲು ಮುಂದಿನ ತಿಂಗಳು ಫೆಬ್ರವರಿ 19 ಮತ್ತು 20ರಂದು ದಿನಾಂಕ ನಿಗದಿ ಮಾಡಲಾಗಿದ್ದು, ನಾಮಕರಣ ಹಿನ್ನಲೆ ಅರಮನೆ ಶೃಂಗಾರಗೊಳ್ಳುತ್ತಿದೆ. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ರಾಜಮನೆತನದ ಸಂಪ್ರದಾಯದಂತೆ ಸಮಾರಂಭ ನಡೆಯಲಿದೆ.
19ರಂದು ಧಾರ್ಮಿಕ ಪೂಜಾ ವಿಧಾನಗಳು ನಡೆಯಲಿದ್ದು, 20 ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ನಾಮಕರಣ ಶಾಸ್ತ್ರ ಮಾಡಲು ರಾಜಮಾತೆ ಪ್ರಮೋದಾದೇವಿಯವರು ನಿರ್ಧರಿಸಿದ್ದಾರೆ. 1953ರ ಫೆಬ್ರವರಿ 20ರಂದು ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ ಜನ್ಮದಿನವಾಗಿದ್ದು, ಅಂದೇ ತಮ್ಮ ಮೊಮ್ಮಗನಿಗೆ ಉತ್ತರ ಬಾದ್ರ ನಕ್ಷತ್ರದಲ್ಲಿ ನಾಮಕರಣ ಮಾಡಲು ರಾಜಮಾತೆ ನಿರ್ಧರಿಸಿದರಂತೆ. ಯದುವೀರ್ ಪತ್ನಿ ತ್ರಿಷಿಕಾ ಡಿ 7 ರಂದು ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೈಸೂರು ಸಂಸ್ಥಾನದಲ್ಲಿ ಆರೂವರೆದಶಕದ ಬಳಿಕ ಪುತ್ರ ಸಂತಾನ ಪ್ರಾಪ್ತಿಯಾಗಿದ್ದು ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.