ಉಡುಪಿ, ಡಿ 4 (Daijiworld News/ MB) : ಕರ್ನಾಟಕ ರಾಜ್ಯ ಸರ್ಕಾರವು ಸಮುದ್ರದಲ್ಲಿ ಕೆಲವೊಂದು ತರಹದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇಧಿಸಿದೆ. ಆದಾಗ್ಯೂ ಸಹ ಇತ್ತೀಚಿನ ದಿನಗಳಲ್ಲಿ ನಿಷೇಧಿತ ಮೀನುಗಾರಿಕಾ ಪದ್ಧತಿಯಿಂದ ಮೀನುಗಾರಿಕೆ ಮಾಡುತ್ತಿರುವುದಾಗಿ ದೂರುಗಳು ಸ್ವೀಕೃತವಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾಧಿಕಾರಿಗಳ ಮತ್ತು ಮೀನುಗಾರಿಕೆ ಸಂಘ/ ಸಂಸ್ಥೆಗಳ ಸಭೆಯಲ್ಲಿ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986 ರ ಅನ್ವಯ ಟ್ರಾಲ್ ಬೋಟ್ಗಳಲ್ಲಿ ಕಡ್ಡಾಯ 35 ಎಂ.ಎಂ. ಸ್ಕ್ವೇರ್ ಮೆಶ್ ಕಾಡ್ ಎಂಡ್ ಬಳಕೆ, ಪರ್ಸಿನ್ ಮತ್ತು ಸಾಂಪ್ರದಾಯಿಕ ದೋಣಿಗಳಲ್ಲಿ 20 ಎಂ.ಎಂ. ಗಿಂತ ದೊಡ್ಡ ಕಣ್ಣಿನ ಬಲೆಯ ಬಳಕೆ, ಬುಲ್ ಟ್ರಾಲ್, ಬೆಳಕು ಮೀನುಗಾರಿಕೆ, ಅಸಾಂಪ್ರದಾಯಿಕ ಪಚ್ಚೆಲೆ ಮೀನುಗಾರಿಕೆ ಇತ್ಯಾದಿ ಎಲ್ಲಾ ಅವೈಜ್ಞಾನಿಕ ಮತ್ತು ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
ಇದಾಗಿಯೂ, ಯಾವುದೇ ನಿಷೇಧಿತ ಮೀನುಗಾರಿಕಾ ಪದ್ಧತಿಯನ್ನು ಅನುಸರಿಸುತ್ತಿರುವುದು ಕಂಡುಬಂದಲ್ಲಿ, ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಷೇಧಿತ ಮೀನುಗಾರಿಕಾ ಪದ್ಧತಿಗಳನ್ನು ಅನುಸರಿಸುತ್ತಿರುವ ಬೋಟುಗಳ ಮೇಲೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986 ರ ಅನ್ವಯ ಮೀನುಗಾರಿಕೆ ಇಲಾಖಾ ವತಿಯಿಂದ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.