ಉಡುಪಿ, ಡಿ 4 (Daijiworld News/ MB) : ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ದಾನದ ಮೂಲಕ ಮಾತ್ರ ರಕ್ತ ಪಡೆಯಬಹುದಾಗಿದ್ದು, ಅಪಘಾತಗಳು, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಅತ್ಯಗತ್ಯವಾಗಿದೆ. ಯಾವುದೇ ಪ್ರದೇಶದ ಒಟ್ಟು ಜನಸಂಖ್ಯೆಯ ಶೆ.1 ರಷ್ಟು ರಕ್ತ ಸಂಗ್ರಹಣೆ ಅಗತ್ಯವಾಗಿದ್ದು, ಈ ಸಂಗ್ರಹಣೆಯು ಆ ಪ್ರದೇಶದಲ್ಲಿ ಕಂಡು ಬರುವ ರಕ್ತದ ಕೊರತೆಯನ್ನು ಸರಿದೂಗಿಸುತ್ತದೆ.
ಉಡುಪಿ ಜಿಲ್ಲೆಯಲ್ಲಿ ರಕ್ತದ ಸಂಗ್ರಹಣೆಯಲ್ಲಿ ಪ್ರತಿ ವರ್ಷ ಗುರಿ ಮೀರಿದ ಸಾಧನೆ ಕಂಡುಬರುತ್ತಿದ್ದು, 2015-16 ರಲ್ಲಿ 13000 ಯೂನಿಟ್ ರಕ್ತ ಸಂಗ್ರಹಣೆ ಗುರಿ ಇದ್ದು, 26660 ಯೂನಿಟ್ ರಕ್ತ ಸಂಗ್ರಹಿಸಿ 205% ಸಾಧನೆ ಮಾಡಲಾಗಿದೆ, 2016-17 ರಲ್ಲಿ 13000 ಯೂನಿಟ್ ರಕ್ತ ಸಂಗ್ರಹಣೆ ಗುರಿ ಇದ್ದು, 28036 ಯೂನಿಟ್ ರಕ್ತ ಸಂಗ್ರಹಿಸಿ 215% ಸಾಧನೆ ಮಾಡಲಾಗಿದೆ, 2017-18 ರಲ್ಲಿ 13000 ಯೂನಿಟ್ ರಕ್ತ ಸಂಗ್ರಹಣೆ ಗುರಿ ಇದ್ದು, 27092 ಯೂನಿಟ್ ರಕ್ತ ಸಂಗ್ರಹಿಸಿ 208% ಸಾಧನೆ ಮಾಡಲಾಗಿದೆ, 2018-19 ರಲ್ಲಿ 13000 ಯೂನಿಟ್ ರಕ್ತ ಸಂಗ್ರಹಣೆ ಗುರಿ ಇದ್ದು, 28485 ಯೂನಿಟ್ ರಕ್ತ ಸಂಗ್ರಹಿಸಿ 205% ಸಾಧನೆ ಮಾಡಲಾಗಿದೆ, 2019-20 ರಲ್ಲಿ 13000 ಯೂನಿಟ್ ರಕ್ತ ಸಂಗ್ರಹಣೆ ಗುರಿ ಇದ್ದು, ಅಕ್ಟೋಬರ್ ಮಾಹೆಯ ವರೆಗೆ 16732 ಯೂನಿಟ್ ರಕ್ತ ಸಂಗ್ರಹಿಸಿ 128% ಸಾಧನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಬಗ್ಗೆ ಹೆಚ್ಚಿನ ಅರಿವು ಇದ್ದು, ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಏರ್ಪಡಿಸುವ ರಕ್ತದಾನ ಶಿಬಿರಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗಿಲ್ಲ ಅಲ್ಲದೇ ಕಾಲೇಜು ವಿದ್ಯಾರ್ಥಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿದ್ದು, ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸುಮಾರು 8 ಜಿಲ್ಲೆಗಳ ರೋಗಿಗಳು ಆಗಮಿಸುತ್ತಿದ್ದು, ಅವರ ಚಿಕಿತ್ಸೆಗಾಗಿ ಸಹ ಇಲ್ಲಿ ಸಂಗ್ರಹವಾಗುವ ರಕ್ತ ಬಳಕೆಯಾಗುತ್ತಿದೆ, ಜಿಲ್ಲೆಯ ಎಲ್ಲಾ ರಕ್ತದ ಗುಂಪಿನ ಸ್ವಯಂ ಪ್ರೇರಿತ ರಕ್ತದಾನಿಗಳ ವಿವರಗಳು ಆರೋಗ್ಯ ಇಲಾಖೆಯಲ್ಲಿ ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ ಅಪರೂಪದ ಗುಂಪಿನ ರಕ್ತ ಪಡೆಯಲು ಇದು ನೆರವಾಗಲಿದೆ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು.
ಜಿಲ್ಲೆಯಲ್ಲಿ, ಉಡುಪಿ, ಕುಂದಾಪುರ ಮತ್ತು ಕಾರ್ಕಳದಲ್ಲಿ ಬ್ಲಡ್ ಬ್ಯಾಂಕ್ ಸೌಲಭ್ಯವಿದ್ದು, ಒಬ್ಬ ಆರೋಗ್ಯವಂತ ಪುರುಷ ವರ್ಷದಲ್ಲಿ 4 ಬಾರಿ ಮತ್ತು ಮಹಿಳೆ 3 ಬಾರಿ ರಕ್ತದಾನ ಮಾಡಬಹುದಾಗಿದೆ. ಸ್ವಯಂ ಪ್ರೇರಿತ ರಕ್ತದಾನ ಮಾಡುವವರ ವಿವರಗಳನ್ನು, ಆರೋಗ್ಯ ಇಲಾಖೆಯ ಇ-ರಕ್ತಕೋಶ ಎಂಬ ಪೆೀರ್ಟಲ್ನಲ್ಲಿ ಅಳವಡಿಸಲಾಗಿದ್ದು, ಸ್ವಯಂ ಪ್ರೇರಿತ ರಕ್ತದಾನಿಗೆ ಅವನು ರಕ್ತದಾನ ಮಾಡಬಹುದಾದ ತಿಂಗಳ ಬಗ್ಗೆ ಎಸ್.ಎಂ.ಎಸ್ ಅಲರ್ಟ್ ಸಹ ಹೋಗಲಿದ್ದು, ಆ ಸಂದರ್ಭದಲ್ಲಿ ಆತ ಇಚ್ಛಿಸಿದರೆ ರಕ್ತದಾನ ಮಾಡಬಹುದು.
ಒಬ್ಬ ರಕ್ತದಾನಿಯಿಂದ 4 ಜನರ ಪ್ರಾಣ ಉಳಿಸಬಹುದಾಗಿದ್ದು, ಸಾರ್ವಜನಿಕರು, ಅದರಲ್ಲೂ ಆರೋಗ್ಯವಂತ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬಂದಲ್ಲಿ ಸಾವಿರಾರು ಜನರ ಪ್ರಾಣವನ್ನು ಉಳಿಸಬಹುದು. ದೇಶದಲ್ಲಿ 5 ಕೋಟಿ ಯುನಿಟ್ ರಕ್ತದ ಅವಶ್ಯಕತೆ ಇದ್ದು ಇದರಲ್ಲಿ ಅರ್ಧದಷ್ಟನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 10 ಯುನಿಟ್ ರಕ್ತವಿದ್ದು, ರಕ್ತದಾನದ ಸಮಯದಲ್ಲಿ ಕೇವಲ 1 ಯುನಿಟ್ ರಕ್ತವನ್ನು ತೆಗೆಯಲಾಗುತ್ತದೆ.
18 ವರ್ಷ ಮೇಲ್ಪಟ್ಟ ಒಬ್ಬ ವ್ಯಕ್ತಿ 60 ವರ್ಷದವರೆಗೆ ನಿಯಮಿತವಾಗಿ ರಕ್ತದಾನ ಮಾಡಬಹುದಾಗಿದ್ದು, ಒಂದು ಬಾರಿ ರಕ್ತದಾನ ಮಾಡಿದ ಬಳಿಕ ಕನಿಷ್ಠ ಮೂರು ತಿಂಗಳ ಅವಧಿಯವರೆಗೆ ಸಮಯಾವಕಾಶವನ್ನು ತೆಗೆದುಕೊಳ್ಳಬಹುದು. ದೇಶದ ರಕ್ತದ ಅವಶ್ಯಕತೆಯನ್ನು ಪೂರೈಸಲು ಪ್ರತಿದಿನ 38000 ಗಳಷ್ಟು ರಕ್ತದಾನಗಳ ಅವಶ್ಯಕತೆ ಇದ್ದು, ಜನರು ತಾವು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿರುವಂತೆಯೆ ರಕ್ತದಾನದ ಮಹತ್ವದ ಬಗ್ಗೆ ಇತರರಲ್ಲಿಯೂ ಅರಿವು ಮೂಡಿಸುವ ಮೂಲಕ ಹೆಚ್ಚು ಹೆಚ್ಚು ಜನರು ರಕ್ತದಾನ ಮಾಡುವಂತೆ ಪ್ರೇರೇಪಿಸಬಹುದು.