ಬೆಳ್ಮಣ್, ಡಿ 4 (Daijiworld News/ MB) : ಕಾಡು ಪ್ರದೇಶದಲ್ಲಿ ಅನಾರೋಗ್ಯದಿಂದ ಕಳೆದ 10 ದಿನಗಳಿಂದ ಮಲಗಿಕೊಂಡಿದ್ದ ಅನಾಥ ವ್ಯಕ್ತಿಯೊಬ್ಬರನ್ನು ಗಮನಿಸಿದ ಸ್ಥಳೀಯರು ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಮಾರು 75 ವರ್ಷ ಪ್ರಾಯದ ಗರ್ಬುಲ ಎಂಬವರು ಮನೆ ಮಠ ಯಾವುದು ಇಲ್ಲದೆ ಬೋಳ ಪರಿಸರದಲ್ಲಿ ಹಲವು ವರ್ಷಗಳಿಂದಲೂ ಕೂಲಿನಾಳಿ ಮಾಡಿಕೊಂಡು ನದಿಯಲ್ಲಿ ಮೀನು ಹಿಡಿದು ಜೀವನ ಸಾಗಿಸುತ್ತಿದ್ದು ಇದೀಗ ಅನಾರೋಗ್ಯದಿಂದ ಕೂಡಿದ್ದು ಆಶ್ರಯಕ್ಕೆ ಯಾವುದೇ ಮನೆ ಇಲ್ಲದೆ ಬೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರಬೈಲು ಎಂಬಲ್ಲಿ ಕಾಡು ಪ್ರದೇಶದಲ್ಲಿ ಮಲಗಿಕೊಂಡು ಸಾವು ಬದುಕಿನ ಮಧ್ಯ ನರಳಾಡುತ್ತಿದ್ದರು.
ಇವರು ಕಳೆದ ಹತ್ತು ದಿನಗಳಿಂದ ಕಾಣಸಿದಾಗ ಅಲ್ಲಿನ ಸ್ಥಳೀಯರು ಹುಡುಕಾಟ ನಡೆಸಿದ್ದು ಕಾಡು ಪ್ರದೇಶದಲ್ಲಿ ಪೊದೆಗಳ ಮಧ್ಯ ಬಿದ್ದು ನರಳಾಡುತ್ತಿರುವುದನ್ನು ಗಮನಿಸಿ ಊಟ ನೀರು ಕೊಟ್ಟು ಹಾರೈಕೆಯನ್ನು ಮಾಡಿದ್ದಾರೆ .
ಈ ಸುದ್ದಿಯನ್ನು ತಿಳಿದ ಸ್ಥಳೀಯ ಬೋಳ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಪೂಜಾರಿಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ವ್ಯಕ್ತಿಯನ್ನು 108 ಅಂಬುಲೆನ್ಸ್ ಮೂಲಕ ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂದರ್ಭ ಸ್ಥಳೀಯರಾದ ಚಂದ್ರಹಾಸ್, ಸಂತೋಷ್, ಹಾಗೂ ಗ್ರಾ.ಪಂ ಸದಸ್ಯ ಸುರೇಶ್ ಎಂಬವರು ಆತನನ್ನು ಕೆಳದಿನಗಳಿಂದ ಇಲ್ಲಿ ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸುವವರೆಗೂ ಶ್ರಮಿಸಿದ್ದು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಗರ್ಬುಲರಿಗೆ ಕಾರ್ಕಳ ಸರ್ಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.