ಮಂಗಳೂರು ಜ 16 : ಪುತ್ತೂರಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೋಟಿ- ಚೆನ್ನಯರ ಚಿತ್ರವನ್ನು ಬಿಜೆಪಿ ತಮ್ಮ ಬ್ಯಾನರ್ ಲ್ಲಿ ದುರ್ಬಳಕೆ ಮಾಡಿರುವುದನ್ನು ವಿರೋಧಿಸಿ ಜನವರಿ 16 ರಂದು ಮಂಗಳವಾರ ಡಿ.ಸಿ ಕಚೇರಿಯ ಮುಂದೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಪಕ್ಷದ ಪ್ರಚಾರ ಸಭೆಯ ಬ್ಯಾನರ್ಗಳಲ್ಲಿ ದೈವ ದೇವರ ಭಾವಚಿತ್ರ ಹಾಕಿ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಬದಲು ಬಿಜೆಪಿಗೆ ತಾಕತ್ತಿದ್ದರೆ , ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಲಿ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಬಿಜೆಪಿಗೆ ಸವಾಲೆಸೆದಿದೆ. ಭಾರತೀಯ ಜನತಾ ಪಕ್ಷದ ಪ್ರಚಾರ ಸಭೆ ಬ್ಯಾನರ್ಗಳಲ್ಲಿ ದೈವ-ದೇವರ ಭಾವಚಿತ್ರ ಹಾಕಿಕೊಂಡು ಅವಮಾನ ಮಾಡಲಾಗಿದೆ ಎಂದು ಆಕ್ಷೇಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಸಮಿತಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ನಾಯಕರು ಬಿಜೆಪಿಗೆ ಈ ಸವಾಲು ಹಾಕಿದ್ದಾರೆ.
ಜೊತೆಗೆ ಬಿಜೆಪಿಯು ಕೋಟಿ-ಚೆನ್ನಯರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ಚಿಹ್ನೆ ಇರುವ ಬ್ಯಾನರ್ನಲ್ಲಿ ದೈವ-ದೇವರ ಚಿತ್ರ ಬಳಸಿ ರಾಜಕೀಯ ಮಾಡುವುದಲ್ಲದೇ, ಅವಮಾನ ಮಾಡಿದೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮನವಿಯನ್ನು ಸಲ್ಲಿಸಲು ಕಾಂಗ್ರೆಸ್ ಮುಂದಾಗಿದೆ.
ಇದೇ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಮಾಜದಲ್ಲಿ ಬಡ ಜನರಿಗಾಗಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಕೆಲಸ ಮಾಡಿದೆ.ಅಲ್ಲದೆ ಅವರು ಜನರು ರಾಜ್ಯ ಸರ್ಕಾರವು ಪರಿಚಯಿಸಿದ ಹಲವು ಯೋಜನೆಗಳಿಂದ ಲಾಭ ಪಡೆದ್ದಾರೆ ಕೂಡಾ. ಆದರೆ ಬಿಜೆಪಿ ಮತ ಗಳಿಸುವ ಉದ್ದೇಶದಿಂದ ಕೋಟಿ ಚೆನ್ನಯ ದ ಚಿತ್ರವನ್ನು ದುರ್ಬಳಕೆ ಮಾಡುತ್ತಿದ್ದಾರೆ.ಇದು ಬಿಲ್ಲವ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮೇಯರ್ ಕವಿತಾ ಸನಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್ ಮತ್ತು ಇತರರು ಉಪಸ್ಥಿತರಿದ್ದರು.