ಕುಂದಾಪುರ, ಡಿ 03 (Daijiworld News/MSP): ಬಾಬ್ರೀ ಮಸೀದಿ ಹಾಗೂ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದ ಇತ್ತೀಚೆಗೆ ಸುಪ್ರೀಕೋರ್ಟ್ ನೀಡಿದ ತೀರ್ಪಿನ ವಿರುದ್ಧ ನಿಂದನೆ ಮಾಡಿದ ಆರೋಪ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಲ್ಲಿ ಪ್ರಚೋದನೆ ಆರೋಪದಲ್ಲಿ ಪಿಎಫ್ಐ ಮುಖಂಡನೊಬ್ಬನನ್ನು ಬೈಂದೂರು ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಬೈಂದೂರು ಸಮೀಪದ ಶಿರೂರು ಕಳುವಿನ ಹಿತ್ಲು ಗೌಸಿಯ ಮೊಹಲ್ಲಾ ನಿವಾಸಿ ಮಹಮ್ಮದ್ ಝಪ್ರಿ ಎಂದು ಗುರುತಿಸಲಾಗಿದೆ.
ಮಹಮ್ಮದ್ ಝಪ್ರಿ ಕೇರಳ ರಾಜ್ಯದಲ್ಲಿ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಶಿರೂರು ಘಟಕದ ಅಧ್ಯಕ್ಷನಾಗಿದ್ದು, ಆತ ತನ್ನ ಜಾಗದಲ್ಲಿರುವ ಬಾವಿ ಕಟ್ಟೆಗೆ ನ್ಯಾಯಾಲಯ ನಿಂದನೆ; ಕೋಮು ಪ್ರಚೋದನೆ ನೀಡುವಂತಹ ಬ್ಯಾನರ್ ಅಳವಡಿಸಿದ್ದಾನೆ ಎಂದು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಬಾಬ್ರಿ ತೀರ್ಪು ನ್ಯಾಯದ ನಿರಾಕರಣೆ ನ್ಯಾಯಕ್ಕಾಗಿ ಧ್ವನಿಯೆತ್ತಿ. ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.