ಪುತ್ತೂರು, ಡಿ 03 (Daijiworld News/MSP): ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಪುತ್ತೂರಿನ ಪಡೀಲಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಪಡೀಲು ದಿ.ನಾಗರಾಜ್ ಎಂವರದ ಪುತ್ರಿ ಉಷಾ(17)ಎಂದು ಗುರುತಿಸಲಾಗಿದೆ. ಡಿ.2ರಂದು ಷಷ್ಠಿಮಹೋತ್ಸವದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆಯಿದ್ದುದರಿಂದ ಉಷಾ ಮನೆಯಲ್ಲಿಯೇ ಇದ್ದರು. ಸಂಜೆ ವೇಳೆಗೆ ತಾಯಿ ಪೇಟೆಗೆ ಹೋಗಿದ್ದರು. ಮನೆಯಲ್ಲಿರುವ ಆಕೆಯ ಮೂಗ ಅಜ್ಜ ಶೌಚಾಲಯಕ್ಕೆ ಹೋಗಿರುವ ವೇಳೆ ಆಕೆ ಕೋಣೆಯ ಬಾಗಿಲಿನ ಚಿಲಕ ಹಾಕಿ ಕೋಣೆಯ ಛಾವಣಿಗೆ ಚೂಡಿದಾರ್ನ ವೇಲ್ನಿಂದ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಶೌಚಾಲಯದಿಂದ ಹೊರಬಂದ ಅಜ್ಜ ಆಕೆಯ ಕೋಣೆಯ ಬಾಗಿಲು ಬಡಿದರೂ ಹೊರಬಾರದಿರುವುದರಿಂದ ಆತಂಕಗೊಂಡು ಮನೆ ಹೊರಗಡೆಯಿಂದ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಬಳಿಕ ಅವರು ಇತರರಿಗೆ ಮಾಹಿತಿ ನೀಡಿದ್ದರು. ಘಟನೆಗೆ ನಿಖರ ಕಾರಣ ಲಭ್ಯವಾಗಿಲ್ಲ. ನಗರ ಠಾಣಾ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.ಮೃತರು ತಾಯಿ ಗೀತಾ, ಸಹೋದರ ಅಭಿಜಿತ್ರವರನ್ನು ಅಗಲಿದ್ದಾರೆ.