ಮಂಗಳೂರು, ಡಿ 2 (DaijiworldNews/SM): ವಾಹನಗಳ ತಪಾಸಣೆ ಸಂದರ್ಭದಲ್ಲಿ ಮಾಲಕರು ತಮ್ಮ ವಾಹನಗಳ ಮೂಲ ದಾಖಲೆ ಪತ್ರಗಳನ್ನು ಖಡ್ಡಾಯವಾಗಿ ಇಟ್ಟುಕೊಳ್ಳಬೇಕೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ನೀಡಿದ್ದ ಹೇಳಿಕೆ ಸರಿಯಲ್ಲ. ಇದೊಂದು ತಪ್ಪು ತಿಳುವಳಿಕೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ ಹೇಳಿದ್ದಾರೆ.
ಯಾವುದೇ ವಾಹನಗಳ ಮಾಲಕ ತನ್ನ ಜೊತೆಗೆ ಮೂಲ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯ ಇಲ್ಲ. ಕೋರ್ಟು, ಕಚೇರಿ, ಪೊಲೀಸ್ ಇಲಾಖೆಯ ವಿಚಾರಣೆ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ಅಗತ್ಯವಾಗಿ ಹಾಜರುಪಡಿಸಬೇಕು. ಆದರೆ ಕಮಿಷನರ್ ಅವರು ನೀಡಿರುವ ಹೇಳಿಕೆಯಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿದ್ದು, ಈ ನಿಟ್ಟಿನಲ್ಲಿ ಅವರು ಸ್ಪಷ್ಟನೆ ನೀಡಬೇಕು ಎಂದು ಜೆರಾರ್ಡ್ ಟವರ್ ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಶುಕ್ರವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ವಾಹನ ಮಾಲಕರು ತಮ್ಮ ಜೊತೆಗೆ ಮೂಲ ದಾಖಲೆಗಳನ್ನು ಖಡ್ಡಾಯವಾಗಿ ಇಟ್ಟುಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದ್ದರು.