ಕುಂದಾಪುರ, ಡಿ 2 (DaijiworldNews/SM): ಭಾನುವಾರ ಸಂಜೆ ಮೆಹಂದಿ ಕಾರ್ಯಕ್ರಮ ಮುಗಿಸಿದ ಬಳಿಕ ಸೋಮವಾರ ಮದುವೆಗೆ ಸಿದ್ಧವಾದ ನವ ವಧುವೊಬ್ಬಳು ಬೆಳ್ಳಂಬೆಳಗ್ಗೆ ನಾಪತ್ತೆಯಾಗಿ ಬೇರೊಬ್ಬನ ಜೊತೆ ಮದುವೆಯಾದ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿಯಲ್ಲಿ ನಡೆದಿದೆ.
ವಧು ಮರವಂತೆ ನಿವಾಸಿಯಾಗಿದ್ದು, ಆಕೆಗೆ ತ್ರಾಸಿಯ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ನಡೆದಿತ್ತು. ಹಾಗೂ ಭಾನುವಾರ ಸಂಜೆ ಮೆಹಂದಿ ಕಾರ್ಯಕ್ರಮವನ್ನೂ ಅದ್ಧೂರಿಯಾಗಿ ನಡೆಸಲಾಗಿತ್ತು. ಮೆಹಂದಿ ಕಾರ್ಯಕ್ರಮ ಮುಗಿದ ಬಳಿಕ ವಧುವಿನ ಮನೆಯಲ್ಲಿ ಎಲ್ಲರೂ ರಾತ್ರಿ ಮಲಗಿದ್ದರು. ಬೆಳಿಗ್ಗೆ ಸುಮಾರು ೫ ಗಂಟೆಗೆ ಎದ್ದು ನೋಡಿದಾಗ ಸಿಂಗರಿಸಲ್ಪಟ್ಟ ಮದುಮಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ಇತ್ತ ಮದುವೆಯ ಗಂಡು ಮನೆಯಿಂದ ತ್ರಾಸಿಯ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆಯಬೇಕಿದ್ದ ಮದುವೆಗೆ ಹೊರಟು ಬಂದಿದ್ದ. ಆದರೆ ಎಷ್ಟೇ ಹೊತ್ತಾದರೂ ಹೆಣ್ಣಿನ ಕಡೆಯವರು ಬಾರದೇ ಇದ್ದುದನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾದವಳಿಗೆ ದೇವಸ್ಥಾನದಲ್ಲಿ ಮದುವೆ:
ಇನ್ನು ಇತ್ತ ಮನೆಯಿಂದ ಕೊಡಿಸಲಾದ ಹೊಸ ಬಟ್ಟೆಯಲ್ಲಿ ಮದುವೆಗೆ ಖರೀದಿಸಿದ ಆಭರಣದಲ್ಲಿ ಮನೆಯಿಂದ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಯುವತಿ ದೇವಸ್ಥಾನವೊಂದರಲ್ಲಿ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿರುವುದಾಗಿ ತಿಳಿದು ಬಂದಿದೆ. ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಮನೆಯಲ್ಲಿ ಈ ವಿಚಾರವನ್ನು ತಿಳಿಸಿದ್ದರೂ ಮನೆಯವರ ವಿರೋಧವಿತ್ತು ಎನ್ನಲಾಗಿದೆ.
ಅದೇ ಕಾರಣಕ್ಕೆ ಮನೆಯವರು ಹುಡುಕಿದ ಯುವಕನೊಂದಿಗೆ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ ಯುವತಿ ಮದುವೆಯ ಸಂಪ್ರದಾಯವನ್ನೆಲ್ಲಾ ಮನೆಯವರೊಂದಿಗೆ ಪೂರೈಸಿದ್ದು, ಮನೆಯವರ ಖರ್ಚಿನಲ್ಲಿಯೇ ಪ್ರೇಮಿಸಿದ ಯುವಕನೊಂದಿಗೆ ವಿವಾಹವಾಗುವ ಪ್ಲಾನ್ ಮಾಡಿದ್ದಳು ಎಂದು ತಿಳಿದು ಬಂದಿದೆ. ಸೋಮವಾರ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ತ್ರಾಸಿಯಲ್ಲಿ ಎರಡು ವಾಹನಗಳು ಕಾಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದು, ಮಧುಮಗಳು ಅದರಲ್ಲಿಯೇ ಪರಾರಿಯಾಗಿದ್ದಳು ಎಂದು ತಿಳಿದುಬಂದಿದೆ.
ಇತ್ತ ಮದುಮಗಳು ಇಲ್ಲದೇ ಕಂಗಾಲಾಗಿದ್ದ ಹೆಣ್ಣಿನ ಕಡೆಯವರು ಮತ್ತು ಗಂಡಿನ ಕಡೆಯವರು ದಿಕ್ಕು ತೋಚದೇ ಇದ್ದಾಗ ಯುವಕನನ್ನು ಮದುವೆಯಾಗಲು ಮದುವೆಗೆ ಬಂದಿದ್ದ ಯುವತಿಯೊಬ್ಬಳು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಯುವತಿ ನಾಪತ್ತೆಯಾಗಿರುವ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.