ಮಂಗಳೂರು, ಡಿ.2 (Daijiworld News/MSP): ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಬಲಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಈ ನಡುವೆ ಹವಾಮಾನ ಇಲಾಖೆಯು ನೀಡಿದ ಹವಾಮಾನ ಮುನ್ಸೂಚನೆಯಂತೆ ಡಿಸೆಂಬರ್ 3, 4, 5 ಮತ್ತು 6 ರಂದು ಅರಬ್ಬೀ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಈ ಮೂಲಕ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.