ಬೆಳ್ತಂಗಡಿ, ಡಿ 2 (Daijiworld News/MB) : ಶಿಬಾಜೆ ಗ್ರಾಮದ ಪೆರ್ಲ ಎಂಬಲ್ಲಿರುವ ಸರ್ಕಾರಿ ಶಾಲೆಯೊಂದರ ಬಳಿ ಇದ್ದ ತೆರೆದ ಬಾವಿಯ ನೀರನ್ನು ಕುಡಿದ ಶಾಲೆಯ ಮಕ್ಕಳಿಗೆ ಹೊಟ್ಟೆನೋವು ಮತ್ತು ವಾಂತಿ ಆರಂಭವಾಗಿದ್ದು ಆ ಕೂಡಲೇ ವಿಧ್ಯಾರ್ಥಿಗಳನ್ನು ದಾಖಲಿಸಲಾಗಿದೆ.
ಈ ಪೈಕಿ ಗಂಭೀರವಾಗಿರುವ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ನಡೆಯಲು ಕಾರಣ ಯಾರೋ ದುಷ್ಕರ್ಮಿಗಳು ಬಾವಿಗೆ ವಿಷ ಬೆರೆಸಿರುವುದೇ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
7ನೇ ತರಗತಿ ವಿದ್ಯಾರ್ಥಿ ಚೇತನ್ ಕುಮಾರ್(12), 8ನೇ ತರಗತಿ ವಿದ್ಯಾರ್ಥಿಗಳಾದ ಸುದೀಶ್(14), ಯೋಗಿಶ್(14), ರಾಧಾಕೃಷ್ಣ(14), 6ನೇ ತರಗತಿಯ ವಿದ್ಯಾರ್ಥಿಗಳಾದ ಸುದೀಪ್(12), ಮೋನಿಸ್(12) ಹಾಗೂ ಶ್ರವಣ್(12) ಅಸ್ವಸ್ಥಗೊಂಡ ವಿದ್ಯಾರ್ಥಿಗಳು.
ಶಾಲಾ ವಿದ್ಯಾರ್ಥಿಗಳು ಶಾಲಾ ತರಕಾರಿ ತೋಟಕ್ಕೆ ನೀರು ಹಾಕುತ್ತಿದ್ದ ಸಂದರ್ಭದಲ್ಲಿ ಎಂಟು ವಿದ್ಯಾರ್ಥಿಗಳು ಅದೇ ನೀರನ್ನು ಕುಡಿದಿದ್ದು ಆ ಕೂಡಲೇ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ವಿಷಯ ತಿಳಿದ ಶಾಲಾ ಮುಖ್ಯ ಶಿಕ್ಷಕಿ ಪರಿಶೀಲನೆ ನಡೆಸಿದಾಗ ಬಾವಿ ಸಮೀಪ ಕ್ಯಾನ್ ಒಂದು ಕಂಡುಬಂದಿದೆ. ಈ ನಡುವೆ ವಿದ್ಯಾರ್ಥಿಗಳನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅಲ್ಲಿಂದ ನಾಲ್ಕು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರಗೆ ಹಾಗೂ ನಾಲ್ಕು ವಿದ್ಯಾರ್ಥಿಗಳನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥ ಮಕ್ಕಳ ಜೀವಕ್ಕೆ ಯಾವುದೇ ತೊಂದರೆ ಆಗಿಲ್ಲ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದು, ಬಾವಿಯ ನೀರನ್ನು ಪರಿಶೀಲನೆಗಾಗಿ ಕಳುಹಿಸಿದ್ದು ವರದಿ ಬಂದ ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.