ಮಂಗಳೂರು, ಡಿ.02(Daijiworld News/ss): ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಬಲಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ.
ಮುಂದಿನ 2 ದಿನಗಳ ಕಾಲ ಹಗುರದಿಂದ ಕೂಡಿದ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಡಿ.1ರ ಮಧ್ಯಾಹ್ನದ ಬಳಿಕ ಅನಿರೀಕ್ಷಿತ ಉತ್ತಮ ಮಳೆಯಾಗಿದೆ.
ಚಂಡಮಾರುತದ ಪರಿಚಲನೆಯಿಂದ ರಾಜ್ಯದಲ್ಲಿ ಮುಂದಿನ 2-3 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 2 ದಿನಗಳಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಬೆಂಗಳೂರು ಸಹಿತ ಹಲವೆಡೆ ತುಂತುರು ಮಳೆಯಾಗಿದೆ. ಮುಂದಿನ 2-3 ದಿನ ಕರಾವಳಿ, ದ.ಒಳನಾಡು ಮತ್ತು ಉ. ಒಳನಾಡಿನಲ್ಲಿ ಮೋಡದ ವಾತಾವರಣವಿದ್ದು, ಚಳಿಗಾಳಿ ಜತೆಗೆ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳ್ತಂಗಡಿ ನಗರದಲ್ಲಿ ತುಂತುರು ಮಳೆಯಾದರೆ, ಗ್ರಾಮೀಣ ಭಾಗಗಳಲ್ಲಿ ಉತ್ತಮವಾಗಿ ಸುರಿದಿದೆ. ವಿಟ್ಲ, ಬಂಟ್ವಾಳ, ಸುರತ್ಕಲ್ನಲ್ಲಿ ಸಾಧಾರಣ ಮಳೆಯಾಗಿದೆ. ಸುಳ್ಯ ತಾಲೂಕಿನ ಕೆಲವೆಡೆ ಗುಡುಗು ಸಹಿತ ವರ್ಷಧಾರೆಯಾಗಿದೆ. ಹಳೆಯಂಗಡಿ, ಕಡಬ, ಪುತ್ತೂರಿನಲ್ಲಿ ಹನಿ ಮಳೆಯಾಗಿದೆ.