ಕಾರವಾರ, ನ 30 (Daijiworld News/MB) : ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನಲ್ಲಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಸಿಕ್ಕಿಬಿದ್ದ ನಾಲ್ವರು ಆರೋಪಿಗಳಲ್ಲಿ ಇಬ್ಬರಿಗೆ ರೈಲಿನಲ್ಲಿ ಕದಿಯುವುದೇ ಕಸುಬಾಗಿದ್ದು ಈ ಹಿಂದೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಪಿಸ್ತೂಲ್ ಕದ್ದು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರೂ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಉತ್ತರ ಪ್ರದೇಶದವರಾದ ದಿಲೀಪ್ ಮಿಶ್ರ ಹಾಗೂ ಮುಕದ್ದರ್ ಅಹಮದಾಬಾದ್ ನ ನೈನಿ ಎಂಬಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು ಕೂಡಾ ಕೊಂಕಣ ರೈಲಿನಲ್ಲಿ ಪ್ರಯಾಣಿಕರ ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ಅವರೊಂದಿಗೆ ಕುಲ್ಲು ನಿಶಾದ್ ಎಂಬಾತನೂ ಸೇರಿದ್ದಾನೆ ಎಂಬ ಮಾಹಿತಿ ದೊರಕಿದೆ.
ಆರೋಪಿಗಳಿಂದ ಪೊಲೀಸರು ಚಿನ್ನಾಭರಣ,ಮೊಬೈಲ್ ಹಾಗೂ ನಗದನ್ನು ವಶಕ್ಕೆ ಪಡೆದಿದ್ದು ಪ್ರಯಾಣಿಕರಾದ ಉಡುಪಿಯ ಚೈತ್ರಾ ಶೆಟ್ಟಿ ನೀಡಿದ ದೂರಿನ ಅನ್ವಯ ಈ ವಸ್ತುಗಳು ಸುಮಾರು 4 ಲಕ್ಷ ಮೌಲ್ಯದ್ದು ಎನ್ನಲಾಗಿದೆ.
ಆರೋಪಿಗಳ ಬಂಧನಕ್ಕೆ ಮುಂಬೈನ ಬೇಲಾಪುರದಲ್ಲಿರುವ ಕೊಂಕಣ ರೈಲ್ವೇ ಕೇಂದ್ರ ಕಚೇರಿಗೆ ದೊರಕಿದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ಭಟ್ಕಳದ ರೈಲ್ವೇ ಪೊಲೀಸರಿಗೆ ಮಂಗಳೂರಿನತ್ತ ಹೊರಟಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಿಳೆಯೊಬ್ಬರ ಚಿನ್ನಾಭರಣ ಕಳವಾಗಿದ್ದು ಈ ಕುರಿತು ಪರಿಶೀಲನೆ ನಡೆಸಿ ಎಂದು ಸೂಚಿಸಿದ್ದರು. ಕೂಡಲೇ ಎಸ್ಪಿ ಶಿಶುಪಾಲ, ಕಾನ್ಸ್ಟೆಬಲ್ಗಳಾದ ವಿವಿ ಶ್ರೀಕಾಂತ, ಹೇರಂಭ ನಾಯ್ಕ ಹಾಗೂ ಶಶಿಕಲಾ ಮಟರ್ಗಾ ಮುರ್ಡೇಶ್ವರ ರೈಲ್ವೇ ನಿಲ್ದಾಣಕ್ಕೆ ತೆರಳಿದ್ದು ಅಷ್ಟರಲ್ಲೇ ನಿಲ್ದಾಣದಿಂದ ರೈಲು ಹೊರಡಿತ್ತು. ಆ ಕೂಡಲೇ ಪ್ಲಾಟ್ಫಾರಂನ ಸುತ್ತ ಪೊಲೀಸರು ಕುಡುಕಾಟ ನಡೆಸಿದ್ದು ಬಳಿಕ ಸ್ಥಳದಲ್ಲಿದ್ದ ಆಟೋಚಾಲಕರನ್ನು ಪ್ರಶ್ನಿಸಿದಾಗ ಮೂವರು ಅನುಮಾಸ್ಪದವಾಗಿ ವರ್ತಿಸಿದ್ದು ಅವರು ಭಟ್ಕಳ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಆ ಕೂಡಲೇ ಪೊಲೀಸರು ಭಟ್ಕಳ ಬಸ್ ನಿಲ್ದಾಣಕ್ಕೆ ತೆರಳಿದ್ದು ಆರೋಪಿಗಳು ಪಣಜಿಗೆ ಹೋಗುವ ಬಸ್ನಲ್ಲಿ ಪ್ರಯಾಣಿಸಿದ ವಿಚಾರ ತಿಳಿದು ಬಂದಿದೆ.
ಈ ಕುರಿತು ಕಾರವಾರದ ಆರ್.ಪಿ.ಎಫ್ನ ಸಹಾಯಕ ಭದ್ರತಾ ಆಯುಕ್ತ ಪ್ರವೀಣ ಕುಮಾರ್ ಹಾಗೂ ಐ.ಪಿ.ಎಫ್. ಬಿನೋದ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು ಅವರಿಬ್ಬರು ಕಾನ್ಸ್ಟೆಬಲ್ ದಿಲೀಪ ಗುನಗಿ ಹಾಗೂ ಚಾಲಕ ಸುಭಾಸ ಮಾಯೇಕರ್ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ೬೬ರತ್ತ ಧಾವಿಸಿದ್ದು ಬಸ್ ಚಾಲಕನಿಗೆ ಈ ಕುರಿತು ಮಾಹಿತಿ ನೀಡಿ ಯಾವುದೇ ಕಾರಣಕ್ಕೂ ಅವರತ್ತ ವಿಶೇಷ ಗಮನ ಹರಿಸಬಾರದು ಎಂದು ತಿಳಿಸಿದ್ದಾರೆ. ಹಾಗೆಯೇ ಪೊಲೀಸರು ಕಂಡಾಗ ಬಸ್ ಅನ್ನು ನಿಲ್ಲಿಸಬೇಕೆಂದು ತಿಳಿಸಿದ್ದಾರೆ. ಅದರಂತೆ ಕಾರವಾರದ ಬೈಲಕೋಲ ಬಳಿ ಚಾಲಕನಿಗೆ ಪೊಲೀಸರು ಕಂಡು ಬಂದಾಗ ಬಸ್ ನಿಲ್ಲಿಸಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.