ಉಡುಪಿ, ನ.30(Daijiworld News/SS): ಶಿರ್ವ ಮೂಲದ ಯುವಕನನ್ನು ಅಮೆರಿಕದ ಸ್ಯಾನ್ಬರ್ನಾಡಿಯೊ ಎಂಬ ಪ್ರದೇಶದಲ್ಲಿ ಗುಂಡಿಟ್ಟು ಹತ್ಯೆಗೈದ ದುರಂತ ಘಟನೆ ವರದಿಯಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡ್ಡಿನೋ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ, ಅಭಿಷೇಕ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ.
ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್ (25), ಕ್ಯಾಲಿಫೋರ್ನಿಯಾದ ಸನ್ ಬೆರ್ನಾರ್ಡಿನೋ ಹೋಟೆಲ್ನಲ್ಲಿ ಸಂಪಾದನೆಗಾಗಿ ರಿಸೆಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಉಳಿದುಕೊಂಡಿದ್ದ ಗ್ರಾಹಕನೊಬ್ಬ ರೂಮ್ ಖಾಲಿ ಮಾಡಬೇಕಿತ್ತು. ಈತ ಮಾಡದೆ ಇದ್ದಾಗ ಅಭಿಷೇಕ್ ಕೇಳಿದ್ದಕ್ಕೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಸ ಮುಗಿಸಿದ ಬಳಿಕ ಅಭಿಷೇಕ್ ಹೊರಬರುವಾಗ ಗ್ರಾಹಕ ಹಣೆಗೆ ರಿವಾಲ್ವರ್ನಿಂದ ಗುಂಡಿಟ್ಟು ಹತ್ಯೆ ಮಾಡಿದ ಎನ್ನಲಾಗಿದೆ. ಘಟನೆ ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿದೆ.
ಅಭಿಷೇಕ್ 2 ದಿನಗಳ ಹಿಂದೆ ಅವರ ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದು, ನಂತರ ಘಟನೆ ನಡೆಯುವ 15 ನಿಮಿಷಕ್ಕೂ ಮುಂಚೆ ಮನೆಗೆ ಸಂದೇಶ ಕೂಡ ಕಳುಹಿಸಿದ್ದಾರೆ. ಇದಾದ 15 ನಿಮಿಷಕ್ಕೆ ಅವರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಥ್ಯಾಂಕ್ಸ್ ಗೀವಿಂಗ್ ಡೇ ಆಚರಣೆ ಹಾಗೂ ಸ್ಯಾನ್ಬರ್ನಾಡಿಯೊದಲ್ಲಿನ ಭಾರಿ ಹಿಮಪಾತದಿಂದ ಮೃತದೇಹ ತರಲು ತೊಂದರೆಯಾಗಿದೆ ಎಂದು ತಿಳಿದುಬಂದಿದೆ.