ಬಂಟ್ವಾಳ,ನ 29 (Daijiworld News/MSP): ನಗರದ ತುಂಬೆ ಸಮೀಪದ ಪರನೀರು ಎಂಬಲ್ಲಿ ನೇತ್ರಾವತಿ ನದಿ ತಟದಲ್ಲಿ ಪರಂಬೋಕು ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸಲು ಕಾರ್ಮಿಕರು ಹಾಕಿದ್ದ ಟೆಂಟ್ ಗಳನ್ನು ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು. ಅಕ್ರಮವಾಗಿ ನಿರ್ಮಿಸಲಾಗಿದ್ದ ಒಟ್ಟು 22 ಟೆಂಟ್ ಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಕಾರ್ಯಾಚರಣೆ ಸಂದರ್ಭ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಸಿಬ್ಬಂದಿ ಸದಾಶಿವ ಕೈಕಂಬ, ಪುರುಷೋತ್ತಮ ಹಾಜರಿದ್ದರು.
ಈ ಸಂದರ್ಭ ಮಾತನಾಡಿದ ಎಎಸ್ಪಿ ಸೈದುಲ್ ಅದಾವತ್ ," ಇಲ್ಲಿ ಅಕ್ರಮ ಮರಳು ಸಾಗಣೆ ನಡೆಸುತ್ತಿದ್ದ ಹಲವಾರು ಲಾರಿಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ್ದು, ಗುರುವಾರವೂ ತುಂಬೆ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಮೂರು ಬೋಟ್ಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ತಿಳಿಸಿದರು.