ಕುಂದಾಪುರ, ನ 28(Daijiworld News/MSP): " ಇತ್ತೀಚಿನ ದಿನಗಳಲ್ಲಿ ಶಂಕರನಾರಾಯಣ ಅಹಿತಕರ ಘಟನೆಗಳಿಗೆ ಸುದ್ದಿಯಾಗುತ್ತಿದೆ, ಮನೆ ಯಜಮಾನ ಸೂರ್ಯನಾರಾಯಣ ಆತ್ಮಹತ್ಯೆ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ವಿಶೇಷ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತಿದ್ದಾರೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕುಂದಾಪುರದ ಶಂಕರನಾರಾಯಣದ ಬೆಳ್ವೆ ಎಂಬ ಗ್ರಾಮದಲ್ಲಿ ಬುಧವಾರ ನಡೆದ ಮನೆ ಯಜಮಾನ ಸೂರ್ಯನಾರಾಯಣ ಆತ್ಮಹತ್ಯೆ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಬರ್ಬರ ಹತ್ಯೆ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು.
ಈ ವಿಚಾರವಾಗಿ ಮಾತನಾಡಿದ ನಿಶಾ ಜೇಮ್ಸ್, "ಶಂಕರನಾರಾಯಣದಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಘಟನೆ ನಡೆದ ಮನೆಯಲ್ಲಿ ಯಾವುದೇ ಡೆತ್ ನೋಟ್ ಕಂಡು ಬಂದಿಲ್ಲ, ಗುರುವಾರ ಸಂಜೆಯೊಳಗೆ ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ಸಿಗುವ ಸಾಧ್ಯತೆ ಇದೆ. ಈ ರೀತಿಯ ಅಪರಾಧಗಳು ಎಲ್ಲಿಯೂ ನಡೆಯಬಾರದು. ಒಂದು ಕುಟುಂಬದ ನಾಲ್ವರು ಏಕಕಾಲಕ್ಕೆ ಮೃತಪಟ್ಟಿರುವುದು ತುಂಬಾ ವಿಚಿತ್ರ ಹಾಗೂ ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಸ್ಥಳೀಯರಿಗೆ ಈ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ" ಎಂದು ಇದೇ ವೇಳೆ ತಿಳಿಸಿದ್ದಾರೆ.
ಶಂಕರನಾರಾಯಣ ಎಂಬುದು ಗ್ರಾಮೀಣ ಪ್ರದೇಶವಾಗಿದ್ದು, ಅಲ್ಲಿನ ಜನರ ಅನಕ್ಷರತೆ, ಮೂಢನಂಬಿಕೆ, ಕಾನೂನು ಮಾಹಿತಿಯ ಕೊರತೆಯಿಂದ ಅಲ್ಲಿ ಕುಕೃತ್ಯಗಳು ಸಂಭವಿಸುತ್ತಿರಬಹುದು ಎಂದು ಪೊಲೀಸ್ ಇಲಾಖೆ ಸಂಶಯ ವ್ಯಕ್ತಪಡಿಸಿದೆ.
ಶಂಕರನಾರಯಣ ಪ್ರದೇಶದಲ್ಲಿ ಇತ್ತೀಚೆಗಷ್ಟೆ ಮಹಿಳೆ ಮಾನಸಿಕ ಖಿನ್ನತೆಗೊಳಪಟ್ಟು ಮಗುವನ್ನು ನೀರಿಗೆ ಎಸೆದ ಘಟನೆ ಸಂಭವಿಸಿತ್ತು, ಈ ಘಟನೆ ಮಾಸುವ ಮುನ್ನವೇ ಇನ್ನೊಂಉದ್ ಅಮಾನವಿಯ ಘಟನೆ ನಡೆದಿದೆ. ಅಲ್ಲದೆ ಸ್ಥಳೀಯ ಗೋಳಿಯಂಡಿಯಲ್ಲೂ ಬಾಲಕಿಯ ರೇಪ್ ಪ್ರಕರಣ, ಮಕ್ಕಳ ಅಪಹರಣದಂತಹ ಘಟನೆಗಳು ನಡೆಯುತ್ತಲೇ ಇದೆ.