ಬಂಟ್ವಾಳ, ನ 28(Daijiworld News/MB) : ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಸಮೀಪದ ಕರ್ಪೆ ಮುಗೇರು ಎಂಬಲ್ಲಿ ನಡೆದಿದೆ.
ಮುಗೇರು ನಿವಾಸಿ ಅಭಯ್ ಜೈನ್ ಅವರ ಪತ್ನಿ ಪ್ರತಿಭಾ ಜೈನ್ (35) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪ್ರತಿಭಾ ಅವರಿಗೆ ಸಣ್ಣ ಪ್ರಾಯದ ಇಬ್ಬರು ಗಂಡು ಮಕ್ಕಳಿದ್ದಾರೆ.
ಪ್ರತಿಭಾ ಅವರ ಗಂಡ ಮುಂಜಾನೆ 5 ಗಂಟೆಯ ವೇಳೆ ಹಾಸನದಲ್ಲಿ ನಡೆಯುವ ಸಂಬಂಧಿಕರ ಮದುವೆಗೆ ತೆರಳಿದ ಬಳಿಕ ಸುಮಾರು 6 ಗಂಟೆಯ ವೇಳೆ ಪ್ರತಿಭಾ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರತಿಭಾ ಅವರ ತಂದೆ ಚಿಕ್ಕಮಗಳೂರು ಸಂಶೆ ನಿವಾಸಿ ಜಿನರಾಜಯ್ಯ , ತನ್ನ ಮಗಳ ಆತ್ಮಹತ್ಯೆಗೆ ಮಾವ ಭುಜಬಲಿ ಅವರೇ ಕಾರಣ ಎಂದು ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದು ಸಮಗ್ರವಾದ ತನಿಖೆಗೆ ಒತ್ತಾಯಿಸಿದ್ದಾರೆ.
ಭುಜಬಲಿ ಅವರ ಪತ್ನಿ ಕಿಡ್ನಿ ವೈಫಲ್ಯದಿಂದ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು ಅವರು ಮರು ಮದುವೆಯ ತಯಾರಿಯಲ್ಲಿದ್ದರು. ಈ ವಿಷಯ ಮತ್ತು ಕೆಲವು ವಿಷಯಗಳಿಂದ ಮನೆಯಲ್ಲಿ ವೈಮನಸ್ಸಿಗೆ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ. ಜೊತೆಗೆ ಭುಜಬಲಿ ಅವರು ಪ್ರತಿಭಾ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು, ಇದೇ ಅವರು ಆತ್ಮಹತ್ಯೆ ಗೆ ಕಾರಣ ಎಂದು ದೂರು ದಾಖಲಾಗಿದೆ.
ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿದ್ದಾರೆ.