ಮಂಗಳೂರು, ನ 28(Daijiworld News/MB) : ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘುವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿ ಭಾರೀ ವಾಹನಗಳ ಸಂಚಾರ ನಿಷೇಧ ವಿಸ್ತರಿಸಿ ನವೆಂಬರ್ 27ರ ಬುಧವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ನವೆಂಬರ್ 28ರಿಂದ ದಿನದ 24 ಗಂಟೆಗಳಲ್ಲಿಯೂ ಈ ರಸ್ತೆಯಲ್ಲಿ ಲಘ ವಾಹನಗಳಿಗೆ ಸಂಚಾರ ಮಾಡಬಹುದು. ಆದರೆ ಘನ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದ್ದು ಈ ಆದೇಶ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ.
ನಿರಂತರವಾಗಿ ಸುರಿದ ಮಳೆಯ ಪರಿಣಾಮದಿಂದಾಗಿ ಚಾರ್ಮಾಡಿ ಘಾಟ್ನಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದವು. ಸೆಪ್ಟೆಂಬರ್ 15ರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು-ವಿಲ್ಲಪುರಂ ರಸ್ತೆಯ 76ಕಿ.ಮೀ.ನಿಂದ 86ಕಿ.ಮೀವರೆಗಿನ ರಸ್ತೆಯ ಮಾರ್ಗದಲ್ಲಿ ಲಘು ವಾಹನಗಳಿಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಂಚಾರಕ್ಕೆ ಅವಕಾಶ ನೀಡಿ ಘನ ವಾಹನಗಳ ಸಂಚಾರವನ್ನು ನಿಷೇಧ ಮಾಡಿತ್ತು. ಈ ಆದೇಶವನ್ನು ಮಾರ್ಪಾಡು ಮಾಡಿದ್ದು, ಲಘು ವಾಹನಗಲೀಗೆ ದಿನದ 24 ಗಂಟೆಗಳ ಕಾಲವು ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ಘನ ವಾಹನ ಸಂಚಾರಕ್ಕೆ ಹೇರಲಾಗಿದ್ದ ನಿಷೇಧವನ್ನು ಮುಂದುವರಿಸಲಾಗಿದೆ.
ಲಘು ವಾಹನಗಳಾದ ಕಾರು, ಜೀಪು, ವ್ಯಾನ್, ಮಿನಿವ್ಯಾನ್, ದ್ವಿಚಕ್ರ ವಾಹನ ಮತ್ತು ಆಂಬುಲೆನ್ಸ್ಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಲ್ಟಿ ಎಕ್ಸೆಲ್ ಟ್ರಕ್, ಟ್ಯಾಂಕರ್ಸ್, ಲಾಂಗ್ ಚಾಸೀಸ್, ಸಾರ್ವಜನಿಕರು ಸಂಚರಿಸುವ ಬಸ್ಗಳು, ಹೆವಿ ಕಮರ್ಷಿಯಲ್ ವಾಹನಗಳು, ಶಿಪ್ ಕಾರ್ಗೊ ಕಂಟೈನರ್, ರಾಜಹಂಸ ಮತ್ತು ಅಧಿಕ ಬಾರದ ಸರಕು ಸಾಗಾಟ ಮಾಡುವ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಅಪಘಾತ ಸಂಭವಿಸದಂತೆ ಮುಂಜಾಗತಾ ಕ್ರಮ ಕೈಗೊಳ್ಳಬೇಕು. ಚಾರ್ಮಾಡಿ ಘಾಟ್ನ ಪ್ರಸ್ತಾಪಿತ ವಮಾರ್ಗದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ರಾ.ಹೆ. ವಿಭಾಗದಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಲಘು ವಾಹನಗಳು ಗಂಟೆಗೆ 20ಕಿ.ಮೀಗೆ ಮೀರದಂತೆ ಸಂಚಾರ ಮಾಡಬೇಕು. ವಾಹನ ಚಾಲಕರು ಅತ್ಯಂತ ಜಾಗರೂಕತೆಯಿಂದ ವಾಹನ ಸಂಚಾರ ಚಲಾಯಿಸಬೇಕು. ಫೋಟೋಗ್ರಾಫಿ ಹಾಗೂ ಸೆಲ್ಫಿ ತೆಗೆಯುವುದು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.