ಮಂಗಳೂರು, ನ 28(Daijiworld News/MB) : ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನವೆಂಬರ್ 28ರ ಬುಧವಾರದಂದು ಸರಣಿ ಸ್ತ್ರೀ ಹಂತಕ ಸೈನಡ್ ಮೋಹನ್(54)ನಿಗೆ ಕಾಸರಗೋಡಿನ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.
ನವೆಂಬರ್ 22 ರಂದು ಯುವತಿಯನ್ನು ಹತ್ಯೆ ಮಾಡಿದ ಆರೋಪ ಸಾಬೀತಾಗಿದ್ದು ನ್ಯಾಯಾಧೀಶ ಸಯಿದುನ್ನೀಸಾ ಅವರು ತೀರ್ಮಾನಿಸಿ, ನವೆಂಬರ್ 26ರಂದು ಶಿಕ್ಷೆಯ ಪ್ರಮಾಣ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದರು. 26ರಂದು ಹಿಯರಿಂಗ್ ಮಾಡಿ ಶಿಕ್ಷೆಯ ಪ್ರಮಾಣ ಘೋಷಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.
2009ರಲ್ಲಿ ಮೋಹನನ್ನು ಕಯ್ಯಾರು ಗ್ರಾಮದ 25 ವರ್ಷದ ಯುವತಿಯನ್ನು ಕುಶಾಲನಗರಕ್ಕೆ ಕರೆದೊಯ್ದು, ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರವೆಸಗಿ ಗರ್ಭನಿರೋಧಕ ಮಾತ್ರೆ ಎಂದು ನಂಬಿಸಿ ಸೈನೆಡ್ ನೀಡಿ ಹತ್ಯೆ ಮಾಡಿದ್ದ.
ಸೈನೆಡ್ ಮೋಹನನ ೧೮ನೇ ಪ್ರಕರಣ ಇದಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ, ಹತ್ಯೆ ಮಾಡಿದಕ್ಕಾಗಿ ಹೈಕೋರ್ಟ್ನ ದೃಢೀಕರಣದೊಂದಿಗೆ ಮರಣದಂಡನೆ, ಅಪಹರಣಕ್ಕಾಗಿ 10ವರ್ಷ ಕಠಿಣ ಸಜೆ ಮತ್ತು 5000 ರೂಪಾಯಿ ದಂಡ, ಅತ್ಯಾಚಾರಕ್ಕಾಗಿ 7 ವರ್ಷ ಕಠಿಣ ಸಜೆ, ಮತ್ತು 5000 ರೂಪಾಯಿ ದಂಡ, ವಿಷ ಪದಾರ್ಥ ಉಣಿಸಿದ್ದಕ್ಕಾಗಿ 10ವರ್ಷ ಕಠಿಣ ಸಜೆ ಮತ್ತು 5000 ರೂಪಾಯಿ ದಂಡ, ಚಿನ್ನಾಭರಣ ಸುಳಿಗೆ ಮಾಡಿದ್ದಕ್ಕಾಗಿ 5 ವರ್ಷ ಕಠಿಣ ಸಜೆ ಮತ್ತು 5000 ರೂಪಾಯಿ ದಂಡ, ವಿಷ ಉಣಿಸಿ ಸುಳಿಗೆ ಮಾಡಿದ್ದಕ್ಕಾಗಿ 10 ವರ್ಷ ಕಠಿಣ ಸಜೆ ಮತ್ತು 5000 ರೂಪಾಯಿ ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದಕ್ಕಾಗಿ 1 ವರ್ಷ ಕಠಿಣ ಸಜೆ, ಸಾಕ್ಷ್ಯ ನಾಶಕ್ಕಾಗಿ 7 ವರ್ಷ ಕಠಿಣ ಸಜೆ ಮತ್ತು 5000 ರೂಪಾಯಿ ದಂಡ ಶಿಕ್ಷೆಯನ್ನು ವಿಧಿಸಲಾಗಿದೆ.
ಈವರೆಗೂ ಮೋಹನನ ಮೇಲೆ ದಾಖಲಾದ 20 ಪ್ರಕರಣಗಳಲ್ಲಿ 18 ಪ್ರಕರಣಗಳ ವಿಚಾರಣೆ ನಡೆದು ತೀರ್ಪು ನೀಡಿದ್ದು ಇದನ್ನು ಸೇರಿಸಿ 5 ಪ್ರಕರಣದಲ್ಲಿ ಗಲ್ಲುಶಿಕ್ಷೆ ವಿಧಿಸಲಾಗಿದೆ. ಇನ್ನು 2 ಪ್ರಕರಣಗಳ ವಿಚಾರಣೆ ಇನ್ನೂ ನಡೆಯಬೇಕಾಗಿದೆ. ಹಿಂದಿನ ನಾಲ್ಕು ಪ್ರಕರಣಗಳಲ್ಲಿ ಹೈಕೋರ್ಟ್ ಒಂದು ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ 5 ವರ್ಷ ಕಠಿಣ ಸಜೆಗೆ ಇಳಿಸಿದೆ. ಒಂದು ಪ್ರಕರಣದಲ್ಲಿ ಮಾತ್ರ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿದೆ. ಕಳೆದ ಅಕ್ಟೋಬರ್ನಲ್ಲಿ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆ ಹೈಕೋರ್ಟ್ನ ದೃಢೀಕರಣಕ್ಕೆ ಬಾಕಿ ಉಳಿದಿದೆ.